ಟೊಮ್ಯಾಟೋ ಕುರಿತಂತೆ ಇತ್ತೀಚಿಗೆ ನೀಡಿರುವ ತಮ್ಮ ಹೇಳಿಕೆ ವಿವಾದಕ್ಕೆ ದಾರಿ ಮಾಡಿಕೊಟ್ಟ ಬೆನ್ನಲ್ಲೇ ನಟ ಸುನೀಲ್ ಶೆಟ್ಟಿ ಈ ಹೇಳಿಕೆ ಸಂಬಂಧ ಸ್ಪಷ್ಟನೆ ನೀಡಿದ್ದಾರೆ. ಟೊಮ್ಯಾಟೋ ಬೆಲೆ ಏರಿಕೆಯು ನಮ್ಮ ಅಡುಗೆ ಮನೆ ಮೇಲೆಯೂ ಪರಿಣಾಮ ಬೀರಿದೆ ಎಂದು ನಟ ಸುನೀಲ್ ಶೆಟ್ಟಿ ಹೇಳಿದ್ದಾರೆ. ಸುನೀಲ್ ಶೆಟ್ಟಿ ಅವರು ಇತ್ತೀಚೆಗೆ ಟೊಮೆಟೊ ಸೇವನೆಯನ್ನು ಕಡಿಮೆ ಮಾಡಿದ್ದೇನೆ ಎಂದು ಹೇಳಿದ್ದರು.
ನಟ ಸುನೀಲ್ ಶೆಟ್ಟಿ ಹೇಳಿಕೆ ವೈರಲ್ ಆದ ಬೆನ್ನಲ್ಲೇ ಹಲವಾರು ರೈತರು ಈ ಹೇಳಿಕೆಯನ್ನು ಖಂಡಿಸಿದ್ದರು. ಸಾಮಾಜಿಕ ಕಾರ್ಯಕರ್ತ ಹಾಗೂ ರೈತ ಸಂತೋಷ್ ಮುಂಡೆ ನಟ ಸುನೀಲ್ ಶೆಟ್ಟಿಯನ್ನು ಟೀಕಿಸಿದ್ದರು. ಪ್ರತಿಭಟನೆಯ ರೂಪಕವಾಗಿ ತಾವು ಸುನಿಲ್ ಶೆಟ್ಟಿಗೆ ಟೊಮ್ಯಾಟೋ ಕಳುಹಿಸಿಕೊಟ್ಟಿದ್ದಾಗಿ ಹೇಳಿದ್ದಾರೆ.
ಟೊಮ್ಯಾಟೋ ಬೆಲೆ ಕೆಜಿಗೆ 2 ರೂಪಾಯಿ ಇದ್ದಾಗ ತರಕಾರಿಗಳನ್ನು ರಸ್ತೆಗೆ ಎಸೆಯುತ್ತಿದ್ದ ರೈತರ ಶ್ರಮದ ಬಗ್ಗೆ ಯಾರೂ ಕಾಳಜಿ ವಹಿಸಿರಲಿಲ್ಲ. ವಾರ್ಷಿಕವಾಗಿ 100 ಕೋಟಿ ಆದಾಯ ಹೊಂದಿರುವ ಇವರಿಗೆ ರೈತರು ಸ್ವಲ್ಪ ಹಣ ಮಾಡಿಕೊಂಡರೆ ಸಮಸ್ಯೆ ಏನು ಎಂದು ಪ್ರಶ್ನೆ ಮಾಡಿದ್ದರು.
“ನನ್ನ ಹೆಂಡತಿ ತಾಜಾ ತರಕಾರಿಗಳನ್ನು ಮಾತ್ರ ತರುತ್ತಾಳೆ ಮತ್ತು ಒಂದೆರಡು ದಿನ ಮಾತ್ರ ಉಳಿಯುತ್ತದೆ. ನಾವು ತಾಜಾ ತರಕಾರಿಗಳನ್ನು ಹೊಂದಲು ಬಯಸುತ್ತೇವೆ. ಆದರೆ, ಇತ್ತೀಚೆಗೆ ಟೊಮೆಟೊ ಬೆಲೆಗಳು ಹೆಚ್ಚಾಗಿದ್ದು, ಅಡುಗೆಮನೆಯಲ್ಲಿರುವ ನಮ್ಮಂತಹ ಜನರ ಮೇಲೆ ಪರಿಣಾಮ ಬೀರುತ್ತಿದೆ” ಎಂದು ಸುನೀಲ್ ಶೆಟ್ಟಿ ಹೇಳಿದ್ದರು.
ಆ್ಯಪ್‌ನಿಂದ ತರಕಾರಿಗಳನ್ನು ಆರ್ಡರ್ ಮಾಡುವುದಾಗಿಯೂ ನಟ ಹೇಳಿದ್ದಾರೆ. “ಆ ಆ್ಯಪ್‌ನಲ್ಲಿ ತರಕಾರಿಗಳ ಬೆಲೆಗಳನ್ನು ನೀವು ನೋಡಿದಾಗ, ನೀವು ಆಶ್ಚರ್ಯಚಕಿತರಾಗುತ್ತೀರಿ. ಅವು ಇತರ ಮಾರುಕಟ್ಟೆಗಳು, ಅಪ್ಲಿಕೇಶನ್‌ಗಳು ಅಥವಾ ತರಕಾರಿ ಮಾರುಕಟ್ಟೆಗಳಿಗಿಂತ ಅಗ್ಗವಾಗಿವೆ. ಆದರೆ, ಇದು ಕೇವಲ ಅಗ್ಗದ ಪ್ರಶ್ನೆಯಲ್ಲ. ಈ ಸಂಪೂರ್ಣ ಖರೀದಿ ಪ್ರಕ್ರಿಯೆಯು ರೈತರಿಗೆ ಅವರ ಉತ್ಪನ್ನಗಳು ನೇರವಾಗಿ ಗ್ರಾಹಕರಿಗೆ ತಲುಪುವುದರಿಂದ ಲಾಭದಾಯಕವಾಗಿದೆ” ಎಂದು ಸುನೀಲ್ ಶೆಟ್ಟಿ ಹೇಳಿದ್ದರು.
ಆದರೆ ಇದೀಗ ತಮ್ಮೆಲ್ಲ ಹೇಳಿಕೆಗೆ ಸುನೀಲ್ ಶೆಟ್ಟಿ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ. ನಾನು ನಮ್ಮ ರೈತರನ್ನು ಬೆಂಬಲಿಸುತ್ತೇನೆ. ಅವರ ಬಗ್ಗೆ ಯಾವುದೇ ನಕರಾತ್ಮಕ ಅಭಿಪ್ರಾಯ ನನಗಿಲ್ಲ. ನಾವು ನಮ್ಮ ದೇಶಿ ಉತ್ಪನ್ನಗಳನ್ನು ಬೆಂಬಲಿಸಬೇಕು. ನಾನು ಎಂದಿಗೂ ರೈತರಿಗೆ ಬೆಂಬಲ ನೀಡುವಂತಹ ಕೆಲಸವನ್ನೇ ಮಾಡಿದ್ದೇನೆ. ರೈತರು ನನ್ನ ಜೀವನದ ಅವಿಭಾಜ್ಯ ಅಂಗವಾಗಿದ್ದಾರೆ. ಓರ್ವ ಹೋಟೆಲ್ ಉದ್ಯಮಿಯಾಗಿ ನಾನು ಎಂದಿಗೂ ರೈತರೊಂದಿಗೆ ಸಂಪರ್ಕ ಹೊಂದಿದ್ದೇನೆ. ನನ್ನ ಹೇಳಿಕೆಗಳಿಂದ ರೈತರಿಗೆ ನೋವಾಗಿದ್ದರೆ ನಾನು ಪ್ರಾಮಾಣಿಕವಾಗಿ ಅದಕ್ಕೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.