ಬೆಂಗಳೂರು: ಸೋದರ ಸಂಬಂಧಿ ಪ್ರೀತಿಸಿದ ಕಾರಣಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಶಶಾಂಕ್ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಾಲೇಜಿಗೆ ತೆರಳುವಾಗ ಶಶಾಂಕ್ ನನ್ನು ಯುವತಿ ಮನೆಯವರು ಅಪಹರಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ದೇಹದ 90ರಷ್ಟು ಭಾಗ ಸುಟ್ಟು ಹೋಗಿತ್ತು. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋದರ ಸಂಬಂಧಿಯಾಗಿದ್ದ ದೊಡ್ಡಪ್ಪನ ಮಗಳನ್ನು ಶಶಾಂಕ್ ಪ್ರೀತಿಸಿದ್ದ. ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದ ಯುವತಿಯನ್ನು ಶಶಾಂಕ್ ಮನೆಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ಮನೆಗೆ ನುಗ್ಗಿದ ಯುವತಿ ಪೋಷಕರು ಹಲ್ಲೆ ಮಾಡಿ ಯುವತಿಯನ್ನು ವಾಪಸ್ ಕರೆದುಕೊಂಡು ಹೋಗಿದ್ದರು.
ನಂತರದಲ್ಲಿ ಶಶಾಂಕ್ ಕಾಲೇಜಿಗೆ ಹೋಗುವ ವೇಳೆ ಆತನನ್ನು ಅಪಹರಿಸಿ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಬೆಂಕಿ ಹಚ್ಚಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಶಶಾಂಕ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.