ಬೆಂಗಳೂರು : ಚಂದ್ರಯಾನ-3 ಬಗ್ಗೆ ಅಪಹಾಸ್ಯ ಮಾಡಿದ ಉಪನ್ಯಾಸಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಹಾಗೂ ಮಾಜಿ ಸಚಿವ ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.
ಇಸ್ರೋದ ಚಂದ್ರಯಾನ-3 ಯೋಜನೆ ಬಗ್ಗೆ ಮಲ್ಲೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಹುಲಿಕುಂಟೆ ಮೂರ್ತಿ ಅಣಕಿಸಿದ್ದರು. ಇಡಿ ದೇಶವೇ ಚಂದ್ರಯಾನ-2 ಯಶಸ್ವಿಯಾಗಲಿ ಎಂದು ಹಾರೈಸಿದರೆ ಇವರು ಚಂದ್ರಯಾನ ಈ ಸಲ ತಿರುಪತಿ ನಾಮವೇ ಗತಿ ಅನಿಸುತ್ತೆ ಎಂದು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ದರು.
ಇಂತಹ ಹೇಳಿಕೆ ನೀಡಿದ್ದ ಉಪನ್ಯಾಸಕ ಹುಲಿಕುಂಟೆ ಮೂರ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಸುರೇಶ್ ಕುಮಾರ್ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಒಬ್ಬ ಉಪನ್ಯಾಸಕನಾಗಿ ಇಂತಹ ಹೇಳಿಕೆ ನೀಡುವುದು ಎಷ್ಟು ಸರಿ..ಇನ್ನೂ ಇವರು ವಿದ್ಯಾರ್ಥಿಗಳಿಗೆ ಯಾವ ರೀತಿ ಮಾರ್ಗದರ್ಶನ ನೀಡುತ್ತಾರೆ..ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.