ಬೆಂಗಳೂರು: ಈ ಬಾರಿ ಮುಂಗಾರು ತಡವಾಗಿ ಆರಂಭವಾಗಿ ಮಳೆ ಕೊರತೆಯಾಗಿದೆ. ರಾಜ್ಯದಲ್ಲಿ ಶೇಕಡ 36 ರಷ್ಟು ಮಳೆ ಕೊರತೆಯಾಗಿದ್ದು, ಬಿತ್ತನೆ ಕಡಿಮೆಯಾಗಿದೆ. ಜುಲೈ 7ರವರೆಗೆ ಶೇಕಡ 33ರಷ್ಟು ಮಾತ್ರ ಬಿತ್ತನೆಯಾಗಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಬಿಜೆಪಿಯ ಹೇಮಲತಾ ನಾಯಕ್ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿ, ಜುಲೈ 7 ರವರೆಗೆ 26.82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯಕ್ಕೆ 10 ದಿನ ತಡವಾಗಿ ಮುಂಗಾರು ಪ್ರವೇಶವಾಗಿದ್ದು, ಜುಲೈ 7ರವರೆಗೆ ವಾಡಿಕೆಯ ಮಳೆ 257 ಮಿ.ಮೀ. ಗೆ ಬದಲಾಗಿ 166 ಮಿ.ಮೀ. ಮಳೆಯಾಗಿದೆ. ಶೇಕಡ 30ರಷ್ಟು ಮಳೆ ಕೊರತೆ ಆಗಿದೆ. ಈ ವರ್ಷದ ಮುಂಗಾರು ಹಂಗಾಮಿನಲ್ಲಿ 82.35 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ ಜುಲೈ 7ರವರೆಗೆ 26.82 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ ಎಂದು ತಿಳಿಸಿದ್ದಾರೆ.
ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ವಿಜಯನಗರ, ಯಾದಗಿರಿ, ಕಲಬುರ್ಗಿ ಜಿಲ್ಲೆಗಳಲ್ಲಿ ಮಳೆ ಕೊರತೆ ಕಂಡುಬಂದಿದೆ ಎಂದು ಹೇಳಿದ್ದಾರೆ.