ಬಾಲಿವುಡ್ನ ಮೊದಲ ಗಾಯಕಿ ಹಾಗೂ ನಟಿ ಕಾನನ್ ದೇವಿ 30 ವರ್ಷಗಳ ಹಿಂದೆ ನಿಧನರಾಗಿದ್ದರು. ಕಾನನ್ ದೇವಿ ಸಿನಿಮಾವೊಂದಕ್ಕೆ 5 ಲಕ್ಷ ರೂಪಾಯಿ ಹಾಗೂ ಒಂದು ಹಾಡಿಗೆ 1 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡುತ್ತಿದ್ದರಂತೆ. ಆಗೆಲ್ಲ ಒಂದು ಸಿನಿಮಾ ತಯಾರಾಗಲು 20 ಸಾವಿರ ರೂಪಾಯಿ ಸಾಲುತ್ತಿದ್ದಂತಹ ಸಮಯ. ಈಗಿನ ಹಣಕ್ಕೆ ಹೋಲಿಕೆ ಮಾಡಿದರೆ ಕಾನನ್ ದೇವಿ ಭಾರತದ ಮೊದಲ ಕೋಟ್ಯಾಧಿಪತಿ ಎಂದು ಹೇಳಿದರೆ ತಪ್ಪಾಗಲಾರದು.
ಕಾನನ್ ದೇವಿ 1916ರ ಏಪ್ರಿಲ್ 22ರಂದು ಪಶ್ಚಿಮ ಬಂಗಾಳದ ಹೌರ ಎಂಬಲ್ಲಿ ಬಡ ಕುಟುಂಬವೊಂದರಲ್ಲಿ ಜನಿಸಿದರು. ಕಾನನ್ ದೇವಿ ನಿಜವಾದ ಪೋಷಕರ ಬಗ್ಗೆ ಸ್ಪಷ್ಟವಾದ ಮಾಹಿತಿ ಎಲ್ಲಿಯೂ ಇಲ್ಲ. ಆದರೆ ಆಕೆಯ ಜೀವನಚರಿತ್ರೆಯ ಪ್ರಕಾರ, ಕಾನನ್ ದೇಚಿಯು ರತನ್ ಚಂದ್ರದಾಸ್ ಹಾಗೂ ರಾಜೋಬಾಲಾ ದಂಪತಿಯ ಜೊತೆ ಬೆಳೆದಿದ್ದರು. ಹೀಗಾಗಿ ಇವರನ್ನೇ ಕಾನನ್ ತನ್ನ ಹೆತ್ತವರಂತೆ ಕಾಣಲು ಆರಂಭಿಸಿದ್ದರು. ಕಾನನ್ರನ್ನು ಮಗಳಂತೆ ಸಾಕಿದ್ದ ರತನ್ ಈಕೆಗೆ ಸಂಗೀತ ಕಲಿಸಿದ್ದರು. ಕೆಲವು ವರ್ಷಗಳ ಬಳಿಕ ಅವರು ನಿಧನರಾದರು.
ರತನ್ ಚಂದ್ರ ಆ ಕುಟುಂಬದ ಏಕೈಕ ದುಡಿಮೆಯ ಕೈ ಆಗಿದ್ದರು. ಹೀಗಾಗಿ ಇವರ ಸಾವು ಕಾನನ್ ಕುಟುಂಬಕ್ಕೆ ದೊಡ್ಡ ಆಘಾತವನ್ನೇ ನೀಡಿತ್ತು. ಒಂದೊತ್ತು ಊಟಕ್ಕೆ ಸಂಕಷ್ಟ ಶುರುವಾಯ್ತು. ಕಾನನ್ ದೇವಿ ಹಾಗೂ ತಾಯಿ ರಾಜೋಬಾಲಾರನ್ನು ಬಾಡಿಗೆ ಮನೆಯಿಂದ ಹೊರ ಹಾಕಲಾಯ್ತು. ಕೊನೆಗೆ ರಾಜೋಬಾಲಾ ಹಾಗೂ ಕಾನನ್ ಕೋಲ್ಕತ್ತಾದ ಶ್ರೀಮಂತರ ಮನೆಯಲ್ಲಿ ಕೆಲಸ ಮಾಡಲು ಆರಂಭಿಸಿದರು. ಕಾನನ್ ಹೀಗೆ ಚಿಕ್ಕ ವಯಸ್ಸಿಗೆ ಮನೆಗೆಲಸದಾಕೆಯಾದರು.
ಆದರೆ ಕಾನನ್ ದೇವಿ ಹಾಗೂ ಆಕೆ ತಾಯಿ ಸಂಕಷ್ಟ ಕಂಡ ಸಂಬಂಧಿಕರು ಅವರನ್ನು ತಮ್ಮ ಮನೆಗೆ ಕರೆತಂದರು. ಆದರೆ ಸಂಬಂಧಿಗಳು ಇವರೊಡನೆ ಅನುಚಿತವಾಗಿ ವರ್ತಿಸಲು ಆರಂಭಿಸಿದರು. ಇದರಿಂದ ಬೇಸತ್ತ ಕಾನನ್ ಕೇವಲ 7 ವರ್ಷ ವಯಸ್ಸಿಗೆ ಇನ್ಯಾರ ಮನೆಯಲ್ಲಿಯೂ ಉಚಿತವಾಗಿ ವಾಸಿಸಬಾರದು ಎಂದು ನಿರ್ಧರಿಸಿದಳು.
ಸಂಬಂಧಿಕರ ಮನೆಯನ್ನು ತೊರೆದ ನಂತರ, ಕಾನನ್ ಮತ್ತು ರಾಜೋಬಾಲಾ ಹೌರಾಕ್ಕೆ ಮರಳಿದರು ಮತ್ತು ಅವರು ವೇಶ್ಯಾಗೃಹದ ಬಳಿ ವಾಸಿಸಲು ಪ್ರಾರಂಭಿಸಿದರು. ಕಾನನ್ ದೇವಿ ಮತ್ತು ಆಕೆಯ ತಾಯಿಯ ಆರ್ಥಿಕ ಸ್ಥಿತಿಯನ್ನು ಕಂಡು, ಕಾಕಾ ಬಾಬು ಎಂದು ಕಾನನ್ ಕರೆಯುತ್ತಿದ್ದ ಕುಟುಂಬದ ಸ್ನೇಹಿತೆ ತುಳಸಿ ಬ್ಯಾನರ್ಜಿ (ರಂಗ ಕಲಾವಿದೆ), ಮದನ್ ಥಿಯೇಟರ್ ಮತ್ತು ಜ್ಯೋತಿ ಥಿಯೇಟರ್‌ಗೆ 10 ವರ್ಷದ ಕಾನನ್‌ನನ್ನು ಪರಿಚಯಿಸಿದರು. ಕಾನನ್ ಚಿಕ್ಕ ವಯಸ್ಸಿನಿಂದಲೂ ತುಂಬಾ ಸುಂದರ ಮತ್ತು ತೀಕ್ಷ್ಣ ಮನಸ್ಸಿನ ಹುಡುಗಿಯಾಗಿದ್ದರು .
ಮದನ್ ಮೂವಿ ಸ್ಟುಡಿಯೋ ಕಾನನ್ ದೇವಿಯ ಸೌಂದರ್ಯದಿಂದ ಪ್ರಭಾವಿತರಾಗಿ ಜೈದೇವ್ ಚಿತ್ರಕ್ಕೆ ತಿಂಗಳಿಗೆ 5 ಸಾವಿರ ರೂಪಾಯಿ ಸಂಬಳ ನೀಡೋದಾಗಿ ಕಾನನ್ಗೆ ಆಫರ್ ನೀಡಿತು. ಇದರಲ್ಲಿ ಕಾನನ್ ಒಂದು ಸಣ್ಣ ಪಾತ್ರದಲ್ಲಿ ನಟಿಸಿದ್ರು. 1928-31ರವರೆಗೆ ಕಾನನ್ ಸಿನಿಮಾದಲ್ಲಿ ನಟಿಸಿದರು. ರಾಧಾ ಫಿಲ್ಮ್ ಕಂಪನಿಯಲ್ಲಿ ಕೆಲಸ ಮಾಡುವಾಗ ಕಾನನ್ ದೇವಿ ಸೂಪರ್ ಸ್ಟಾರ್ ಆಗಿದ್ದರು. ಆಕೆ ತನ್ನ ಕಾಲದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಆಗಿದ್ದರು. ಚಿತ್ರದ ಬಜೆಟ್ 15000-20000 ಇದ್ದಾಗ ಕಾನನ್ ಒಂದು ಹಾಡಿಗೆ 1 ಲಕ್ಷ ಮತ್ತು ಚಿತ್ರಕ್ಕೆ 5 ಲಕ್ಷ ರೂ. ಪಡೆಯುತ್ತಿದ್ದರು.