ನವದೆಹಲಿ: ದೆಹಲಿಯಲ್ಲಿ ಮಂಗಳವಾರ ನಡೆಯಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ(ಎನ್ಡಿಎ) ಸಭೆಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ಜೊತೆ ಮೈತ್ರಿ ಮಾಡಿಕೊಂಡಿರುವ 38 ಪಕ್ಷಗಳು ಭಾಗವಹಿಸಲಿವೆ. ಆಯಾ ಪಕ್ಷದ ನಾಯಕರು ತಮ್ಮ ಹಾಜರಾತಿಯನ್ನು ಖಚಿತಪಡಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೋಮವಾರ ತಿಳಿಸಿದ್ದಾರೆ.
ಭಾರತವನ್ನು ಬಲಪಡಿಸುವುದು ಎನ್ಡಿಎ ಉದ್ದೇಶದ್ದಾಗಿದ್ದರೆ, ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್(ಯುಪಿಎ) ನಾಯಕ ಮತ್ತು ನೀತಿರಹಿತವಾಗಿದೆ ಎಂದು ಅವರು ಟೀಕಿಸಿದರು.
ಪ್ರತಿಪಕ್ಷಗಳನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ ನಡ್ಡಾ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ದೇಶವನ್ನು ಸೇವೆ ಮಾಡಲು ಮತ್ತು ಬಲಪಡಿಸಲು ಉದ್ದೇಶಿಸಿರುವ ಆದರ್ಶ ಮೈತ್ರಿಯಾಗಿದೆ. ಯುಪಿಎಗೆ ನಾಯಕನಿಲ್ಲ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯೂ ಇಲ್ಲ. ಇದು ಸ್ವಾರ್ಥಿ ಹಿತಾಸಕ್ತಿಗಳನ್ನು ಆಧರಿಸಿದ ಮೈತ್ರಿಯಾಗಿದೆ ಮತ್ತು ಫೋಟೋಗಳಿಗಾಗಿ ಮಾತ್ರ ಒಟ್ಟುಗೂಡಿದೆ ಎಂದು ಟೀಕಿಸಿದ್ದಾರೆ.
2024 ರಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಗೆ ಜನಾದೇಶ ನೀಡಲು ಭಾರತ ನಿರ್ಧರಿಸಿದೆ ಎಂದು ಪ್ರತಿಪಾದಿಸಿದರು.
ಕಳೆದ 9 ವರ್ಷಗಳಲ್ಲಿ ‘ಉತ್ತಮ ಆಡಳಿತ’ ನೀಡಿದ್ದೇವೆ ಮತ್ತು ಎನ್ಡಿಎ ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೋದಿ ಸರ್ಕಾರದ ದಾಖಲೆಯನ್ನು ಹೈಲೈಟ್ ಮಾಡಿದರು. ಇಲ್ಲಿಯವರೆಗೆ 28 ಲಕ್ಷ ಕೋಟಿ ರೂ.ಗಳನ್ನು ಫಲಾನುಭವಿಗಳಿಗೆ(ಡಿಬಿಟಿ) ನೇರವಾಗಿ ವರ್ಗಾಯಿಸಲಾಗಿದೆ. ಕಳೆದ 9 ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಬಲಿಷ್ಠ ನಾಯಕತ್ವವನ್ನು ನಾವು ನೋಡಿದ್ದೇವೆ, ಇದು ಅನೇಕರಿಂದ ಮೆಚ್ಚುಗೆ ಪಡೆದಿದೆ. ಭ್ರಷ್ಟಾಚಾರದ ಶೂನ್ಯ ಸಹಿಷ್ಣುತೆಯೂ ಹೆಚ್ಚಾಗಿದೆ. ಕೋವಿಡ್ -19 ನಿರ್ವಹಣೆಯಲ್ಲೂ ಪ್ರಧಾನಿ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು.