
ತಿರುವನಂತಪುರಂ: 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರು ಮಂದಿಯನ್ನು ಕೇರಳ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
2022ರ ಡಿಸೆಂಬರ್ನಲ್ಲಿ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಅಡೂರಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಹುಡುಗಿ ಮನೆಯಲ್ಲಿ ಹೆಚ್ಚಿನ ಸಮಯ ಮೌನವಾಗಿರುತ್ತಿದ್ದಳು. ಆಕೆಯ ಪೋಷಕರು ವಿಚಾರಿಸಿದಾಗ ಅವಳು ಸ್ಪಷ್ಟ ಉತ್ತರವನ್ನು ನೀಡಿರಲಿಲ್ಲ. ನಂತರ ಶಾಲಾ ಅಧಿಕಾರಿಗಳು ಚೈಲ್ಡ್ ಲೈನ್ ಸಹಾಯವನ್ನು ಪಡೆದರು. ಕೌನ್ಸೆಲಿಂಗ್ ನಲ್ಲಿ ಬಾಲಕಿ ಮಾಹಿತಿ ನೀಡಿ, ಆರು ಜನರು ಬೇರೆ ಬೇರೆ ದಿನಾಂಕಗಳಲ್ಲಿ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿಸಿದ್ದಾಳೆ.
ಚೈಲ್ಡ್ ಲೈನ್ ನಿಂದ ಮಾಹಿತಿ ಪಡೆದ ಪೊಲೀಸರು ಜುಲೈ 6 ರಂದು ಪ್ರಕರಣ ದಾಖಲಿಸಿದ್ದಾರೆ. ಆಕೆಯ ಗೆಳೆಯ ಆಮಿಷವೊಡ್ಡಿ ಮೊದಲು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ನಂತರ ತನ್ನ ಸ್ನೇಹಿತರನ್ನು ಭೇಟಿಯಾಗುವಂತೆ ಹೇಳಿದ್ದಾನೆ. ಅವರಲ್ಲಿ ಆರು ಮಂದಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಎಲ್ಲರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಡೂರ್ ಪೊಲೀಸರು ತಿಳಿಸಿದ್ದಾರೆ.