ಬೆಂಗಳೂರು : ಹಲವು ಮಹತ್ವದ ಚರ್ಚೆ, ಪ್ರಶ್ನೋತ್ತರ ಅವಧಿಯ ಬಳಿಕ ವಿಧಾನಸಭಾ ಕಲಾಪ ಸೋಮವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆಯಾಗಿದೆ. ಸ್ಪೀಕರ್ ಯು.ಟಿ ಖಾದರ್ ಕಲಾಪವನ್ನು ಸೋಮವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿದ್ದಾರೆ.
ವಿಧಾನಸಭೆಯಲ್ಲಿ ಇಂದು ‘ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ತಿದ್ದುಪಡಿ’ ವಿಧೇಯಕ ಅಂಗೀಕಾರವಾಗಿದೆ.ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ತಿದ್ದುಪಡಿ’ ವಿಧೇಯಕ ಅಂಗೀಕಾರವಾಗಿದ್ದು, ಈ ವಿಧೇಯಕಅಡಿ ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ಟೆಂಡರ್ ವಿನಾಯ್ತಿಗೆ ಅವಕಾಶ ನೀಡಲಾಗಿದೆ.ಈ ಮೂಲಕ 50 ಲಕ್ಷದಿಂದ 1 ಕೋಟಿ ರೂ.ಗೆ ಟೆಂಡರ್ ವಿನಾಯಿತಿ ಮಿತಿ ಹೆಚ್ಚಳ ಮಾಡಲಾಗಿದೆ.
ಬಿಜೆಪಿ ಅವನತಿ ಕರ್ನಾಟಕದಿಂದ ಶುರುವಾಗಿದೆ : ಸಿಎಂ ಸಿದ್ದರಾಮಯ್ಯ
ಬಿಜೆಪಿ ಅವನತಿ ಕರ್ನಾಟಕದಿಂದ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.ವಿಧಾನಪರಿಷತ್ ನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ 28 ಬಾರಿ ಬಂದರು. ಹಿಂದಿನ ಯಾವ ಪ್ರಧಾನಿಗಳೂ ರಾಜ್ಯಗಳ ಚುನಾವಣೆ ವೇಳೆ ಹೀಗೆ ವರ್ತಿಸಿರಲಿಲ್ಲ. ಆದರೆ ಮೋದಿ ಅವರು ರೋಡ್ ಶೋ, ಪ್ರಚಾರ ನಡೆಸಿದ ಕ್ಷೇತ್ರಗಳಲ್ಲಿ ಹಾಗೂ ಸುತ್ತ ಮುತ್ತಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಭರ್ಜರಿ ಮತಗಳಿಂದ ಗೆಲುವು ಸಾಧಿಸಿತು. ಪ್ರಧಾನಿ ಮೋದಿ ಪ್ರಭಾವ ಮಂಕಾಗುತ್ತಿದೆ ಎಂಬುದಕ್ಕೆ ಇದೆಲ್ಲ ಉದಾಹರಣೆ. ಹಾಗಾಗಿ ಇನ್ಮೇಲೆ ಮೋದಿ ಅವರ ಮೇಲೆ ಅವಲಂಬಿತರಾಗಬೇಡಿ ಎಂದು ಬಿಜೆಪಿ ಸದಸ್ಯರಿಗೆ ಸಲಹೆ ನೀಡಿದ್ದಾರೆ.
ಇದೇ ವೇಳೆ ಪಂಪ ಮಹಾಕವಿ, ಬಸವಣ್ಣರ ಬಗ್ಗೆ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ಹಿಂದೆ ಪಂಪ ಎಂಬ ಕವಿ ಮನುಷ್ಯ ಜಾತಿ ತಾನೊಂದೇ ವಲಂ ಎನ್ನುವ ಮೌಲ್ಯದಿಂದ ಕನ್ನಡ ಸಂಸ್ಕೃತಿಯನ್ನು ಅರಳಿಸಿದರು. ಪಂಪನಿಂದ ಹಿಡಿದು ಬಸವಣ್ಣನವರೆಗೂ ಮಹನೀಯರು ಸಮಾಜಕ್ಕೆ ಮಾದರಿಯಾಗಿದ್ದಾರೆ ಇವರೆಲ್ಲರ ಆಶಯಗಳೇ ನಮ್ಮ ಸಂವಿಧಾನದಲ್ಲಿದೆ. ಆದರೆ ತಾನು ಮಾತ್ರ ಶ್ರೇಷ್ಠ ಎನ್ನುವ ಹಿಟ್ಲರ್ ಒಬ್ಬ ಇದ್ದ. ಆತ ಮತಾಂಧ, ಮನುಷ್ಯ ವಿರೋಧಿ. ಆತನ ಹುಚ್ಚಾಟದಿಂದ ಮನುಷ್ಯರ ಮಾರಣ ಹೋಮಕ್ಕೆ ಕಾರಣವಾಗಿತ್ತು ಎಂದು ಹೇಳುತ್ತಿದ್ದಂತೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಮಾತು ಮುಂದುವರೆಸಿದ ಸಿಎಂ ಸಿದ್ದರಾಮಯ್ಯ, ಹಿಟ್ಲರ್ ಗೆ ಬೈದರೆ ನಿಮಗೇಕೆ ಕೋಪ? ಎಂದು ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು.