ಯುಪಿಎಸ್ಸಿ ವಿಶ್ವದ ಅತೀ ಕಠಿಣ ಪರೀಕ್ಷೆಗಳ ಪೈಕಿ ಒಂದಾಗಿದೆ. ಹೀಗಾಗಿ ಈ ಪರೀಕ್ಷೆಯನ್ನು ಎದುರಿಸುವ ನಿರ್ಧಾರ ಮಾಡಬೇಕು ಎಂದರೆ ನಾವು ಸಾಕಷ್ಟು ಬುದ್ಧಿವಂತರಾಗಿರಬೇಕು. ಈ ರೀತಿ ಯುಪಿಎಸ್ಸಿ ಪರೀಕ್ಷೆಯನ್ನು ಬರೆಯಬೇಕು ಎಂದು ಕನಸು ಕಾಣುತ್ತಿರುವವರಿಗೆ ಅರ್ಚಿತ್ ಚಂದಕ್ರ ಜೀವನಗಾಥೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ.
ನಾಗ್ಪುರದ ಈ ಹುಡುಗ ದೊಡ್ಡ ಗುರಿಯನ್ನು ತಾನು ಸಾಧಿಸಬೇಕು ಎಂಬ ಛಲ ಹೊಂದಿದ್ದರು. ಅರ್ಚಿತ್ ಚಂದಕ್ ನಾಗ್ಪುರದ ಶಂಕರ್ ನಗರದಿಂದ ಬಂದವರು. ಬಿಪಿ ವಿದ್ಯಾ ಮಂದಿರದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ತಿಗೊಳಿಸಿದರು. ಶಾಲಾ ಶಿಕ್ಷಣ ಪೂರ್ಣಗೊಂಡ ಬಳಿಕ ಅರ್ಚಿತ್ ಎಲೈಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐಐಟಿ ಪೂರ್ಣಗೊಳಿಸಿದರು.
ಅರ್ಚಿತ್ ಚಂದಕ್ ದೆಹಲಿಯ ಐಐಟಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ. 2012 ರಲ್ಲಿ ಜೆಇಇ ಪರೀಕ್ಷೆಯಲ್ಲಿ ಸಿಟಿ ಟಾಪರ್ ಆಗಿದ್ದರು. ಆದರೆ ಕಾಲೇಜು ದಿನಗಳಲ್ಲಿಯೇ ತಾನೊಬ್ಬ ಸರ್ಕಾರಿ ಉದ್ಯೋಗಿಯಾಗಿ ದೇಶಕ್ಕೆ ಸೇವೆ ಸಲ್ಲಿಸಬೇಕು ಅನ್ನೋದು ಇವರ ಇರಾದೆಯಾಗಿತ್ತು. ಇಂಟರ್ನ್ಶಿಪ್ ಮಾಡುತ್ತಿದ್ದ ಸಂದರ್ಭದಲ್ಲಿ ಅರ್ಚಿತ್ಗೆ 35 ಲಕ್ಷ ರೂಪಾಯಿಗಳ ಪ್ಯಾಕೇಜ್ ಒಂದನ್ನು ಜಪಾನ್ನ ಕಂಪನಿಯು ಆಫರ್ ಮಾಡಿತ್ತು.
ಇಷ್ಟು ದೊಡ್ಡ ಮೊತ್ತದ ವೇತನವನ್ನು ಕೊಡುವ ಕೆಲಸವನ್ನು ನಿರಾಕರಿಸಿದ ಅರ್ಚಿತ್ ಯುಪಿಎಸ್ಸಿಗೆ ತಯಾರಿ ಆರಂಭಿಸಿದರು. 2016ರಲ್ಲಿ ಪದವಿ ಪೂರ್ಣಗೊಂಡ ಬಳಿಕ ಯುಪಿಎಸ್ಸಿ ತಯಾರಿ ಆರಂಭವಾಯ್ತು. 2018ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಅರ್ಚಿತ್ 184 ರ್ಯಾಂಕ್ ಗಳಿಸಿದರು. ಚಂದಕ್ ರನ್ನು ಆರಂಭದಲ್ಲಿ ಭುಸಾವಾಲ್ನ ಬಜಾರ್ಪೇತ್ ಪೊಲೀಸ್ ಠಾಣೆಯಲ್ಲಿ ಹೌಸ್ ಆಫೀಸರ್ ಆಗಿ ಕೆಲಸಕ್ಕೆ ನೇಮಿಸಲಾಯಿತು. ಇದೀಗ ಅವರನ್ನು ನಾಗಪುರದ ಡಿಸಿಪಿಯಾಗಿ ನೇಮಕ ಮಾಡಲಾಗಿದೆ.
ಚಂದಕ್ ಅವರು ಚೆಸ್ ಆಡಲು ಇಷ್ಟಪಡುತ್ತಾರೆ ಮತ್ತು 1,820 ರ Fide ರೇಟಿಂಗ್ ಹೊಂದಿದ್ದಾರೆ. ಅಲ್ಲದೇ ಅವರು ಫಿಟ್ನೆಸ್ ಉತ್ಸಾಹಿ. 42 ಕಿಮೀ ಮುಂಬೈ ಮ್ಯಾರಥಾನ್ ಅನ್ನು ಸಹ ಪೂರ್ಣಗೊಳಿಸಿದ್ದಾರೆ. ಚಂದಕ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.