ಬೆಂಗಳೂರು: ಜೈನ ಮುನಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಪ್ರಕರಣದ ಪ್ರಮುಖ ಆರೋಪಿ ಹಸನ್ ಡಲಾಯತ್ ಹೆಸರು ಹೇಳುತ್ತಿಲ್ಲ. ಒಂದು ಕೋಮನ್ನು ಸಂತೃಪ್ತಗೊಳಿಸಲು ಈ ರೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಟಿ.ನರಸಿಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆಯಾಗಿದೆ. ಈ ಸರ್ಕಾರ ಬಂದ ಮೇಲೆ ಪಾಕಿಸ್ತಾನ ಬಾವುಟ ಹಾರುತ್ತಿದೆ ಎಂದು ಕಿಡಿಕಾರಿದರು. ಯತ್ನಾಳ್ ಹೇಳಿಕೆಗೆ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸ್ಪೀಕರ್ ಖಾದರ್, ಈ ವಿಚಾರವಾಗಿ ರಾಜಕೀಯ ಮಾತುಗಳು ಬೇಡ ಎಂದರು.
ಜೈನಮುನಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಪೊಲೀಸರು ಒತ್ತಡದಿಂದ ಹಸನ್ ಹೆಸರು ಹೇಳುತ್ತಿಲ್ಲ. ಸಂಜೆ ಆಗುತ್ತಿದ್ದಂತೆಯೇ ಪೊಲೀಸರ ಟ್ಯೂನ್ ಬೇರೆ ಆಗುತ್ತದೆ. ಹಿಂದೆ ಹೀಗೇಯೇ ಮಾಡಿ ನನ್ನ ಮೇಲೆ 23 ಕೇಸ್ ಹಾಕಿದ್ದರು. ಜೈನಮುನಿ ಹತ್ಯೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕನಿಷ್ಠ ಸಂತಾಪ ಕೂಡ ಸೂಚಿಸಿಲ್ಲ. ಇನ್ನೊಂದು ಕೋಮಿನವರಾಗಿದ್ದರೆ ರಾಜ್ಯವಿಡೀ ಮಾತನಾಡುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.