ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಹಣ ವರ್ಗಾವಣೆಗೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ನಾವು ಭರವಸೆ ನೀಡಿದ್ದ ಮೂರನೇ ಗ್ಯಾರಂಟಿಯಾದ ಅನ್ನಭಾಗ್ಯ ಯೋಜನೆ ಇಂದಿನಿಂದ ಜಾರಿಗೆ ಬರುತ್ತಿದೆ. ಅನ್ನಕ್ಕೆ ಕಲ್ಲು ಹಾಕುವ ಕೇಂದ್ರ ಸರ್ಕಾರದ ಕುತಂತ್ರವನ್ನೂ ಮೀರಿ ಹಣ ನೀಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುನ್ನೆಡೆಯುತ್ತಿದ್ದೇವೆ. ಈಗಾಗಲೇ ನಾವು 3 ಗ್ಯಾರಂಟಿಗಳನ್ನು ನೀಡಿದರೂ ಬಿಜೆಪಿಗೆ ವಿಪಕ್ಷ ನಾಯಕ ಸಿಗುವ ಗ್ಯಾರಂಟಿ ಇಲ್ಲ! ಗೌರವಾನ್ವಿತ ಸದನವನ್ನು, ಕನ್ನಡಿಗರನ್ನು ಕುಚೋದ್ಯ ಮಾಡುತ್ತಿದೆಯೇ ಬಿಜೆಪಿ?
ಇಂದು ಸಂಜೆ 5 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಹಾಗೂ ಬಿಪಿಎಲ್ ಕುಟುಂಬದ ಸದಸ್ಯರಿಗೆ ಪ್ರಸ್ತುತ ವಿತರಿಸುತ್ತಿರುವ 5 ಕೆಜಿ ಅಕ್ಕಿ ಜೊತೆಗೆ ಹೆಚ್ಚುವರಿ 5 ಕೆಜಿ ಅಕ್ಕಿ ನೀಡುವುದಾಗಿ ಹೇಳಲಾಗಿತ್ತು. ಅಕ್ಕಿ ಲಭ್ಯವಾಗದ ಕಾರಣ ಪ್ರತಿ ವ್ಯಕ್ತಿಗೆ ತಿಂಗಳಿಗೆ 170 ರೂ. ಗಳಂತೆ ಕುಟುಂಬ ಸದಸ್ಯರ ಖಾತೆಗೆ ಹಣ ಜಮಾ ಆಗಲಿದೆ.