alex Certify BIG NEWS: ನಾಳೆಯೊಳಗಾಗಿ ಪ್ರತಿಪಕ್ಷ ನಾಯಕನ ಆಯ್ಕೆ; ಬಿಜೆಪಿ ಪಾಳೆಯದಲ್ಲಿ ಗರಿಗೆದರಿದ ಚಟುವಟಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾಳೆಯೊಳಗಾಗಿ ಪ್ರತಿಪಕ್ಷ ನಾಯಕನ ಆಯ್ಕೆ; ಬಿಜೆಪಿ ಪಾಳೆಯದಲ್ಲಿ ಗರಿಗೆದರಿದ ಚಟುವಟಿಕೆ

ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ಎರಡು ತಿಂಗಳು ಸಮೀಪಿಸುತ್ತಾ ಬಂದರೂ ಸಹ ಬಿಜೆಪಿ, ಈವರೆಗೂ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಿಲ್ಲ. ವಿಧಾನಮಂಡಲ ಅಧಿವೇಶನ ಈಗಾಗಲೇ ಆರಂಭವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಕೂಡ ಮಂಡಿಸಿದ್ದಾರೆ. ಸೋಮವಾರ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾ ನಿರ್ಣಯ ಪ್ರಸ್ತಾವದ ಜೊತೆಗೆ ಬಜೆಟ್ ಮೇಲಿನ ಚರ್ಚೆಯೂ ಶುರುವಾಗಲಿದ್ದು, ಅಷ್ಟರೊಳಗಾಗಿ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎಂದು ತಿಳಿದು ಬಂದಿದೆ.

ಈ ಮೊದಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ನವ ದೆಹಲಿಗೆ ಕರೆಯಿಸಿಕೊಂಡಿದ್ದ ಹೈಕಮಾಂಡ್ ನಾಯಕರು, ಪ್ರತಿ ಪಕ್ಷ ನಾಯಕನ ಆಯ್ಕೆ ಕುರಿತಂತೆ ಮಾತುಕತೆ ನಡೆಸಿದ್ದರು. ಅಲ್ಲದೆ ಹೈಕಮಾಂಡ್ ವೀಕ್ಷಕರಾಗಿ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ವಿನೋದ್ ತಾವ್ಡೆ ಪ್ರತಿಪಕ್ಷ ನಾಯಕನ ಆಯ್ಕೆ ಕುರಿತಂತೆ ಬಿಜೆಪಿ ಶಾಸಕರುಗಳಿಂದ ಅಭಿಪ್ರಾಯ ಸಂಗ್ರಹಿಸಿ ವರಿಷ್ಠರಿಗೆ ತಲುಪಿಸಿದ್ದಾರೆ. ಇದೆಲ್ಲವನ್ನು ಪರಿಶೀಲಿಸಿ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಒಳಗಾಗಿ ವಿಧಾನಸಭೆಯ ಬಿಜೆಪಿ ನಾಯಕನ ಆಯ್ಕೆ ಆಗುವ ಸಾಧ್ಯತೆ ಇದೆ.

ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಪರಾಭವಗೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಪ್ರತಿ ಪಕ್ಷ ನಾಯಕನ ಆಯ್ಕೆ ಕುರಿತಂತೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ ಎನ್ನಲಾಗಿದೆ. ಇದರ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕವೂ ಆಗಬೇಕಿದ್ದು, ಹೀಗಾಗಿ ಜಾತಿ ಲೆಕ್ಕಾಚಾರ, ಜನಪ್ರಿಯತೆ ಸೇರಿದಂತೆ ಹಲವು ಮಾನದಂಡಗಳನ್ನು ಇಟ್ಟುಕೊಂಡು ಆಯ್ಕೆ ಮಾಡುವ ಸಾಧ್ಯತೆ ಇದೆ. ಪ್ರತಿಪಕ್ಷ ನಾಯಕನ ಸ್ಥಾನಕ್ಕಾಗಿ ಬಸವರಾಜ ಬೊಮ್ಮಾಯಿ, ಅಶ್ವತ್ಥ ನಾರಾಯಣ, ಸುನಿಲ್ ಕುಮಾರ್ ಸೇರಿದಂತೆ ಹಲವರ ಹೆಸರುಗಳು ಪ್ರಸ್ತಾಪವಾಗಿದ್ದು ಅಂತಿಮವಾಗಿ ಯಾರಿಗೆ ಈ ಹುದ್ದೆ ದೊರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...