ಭಾರತದ ಐಐಟಿಗಳು ಗುಣಮಟ್ಟದ ಉನ್ನತ ಶಿಕ್ಷಣದ ಕಾರಣಕ್ಕೆ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಇದೀಗ ಮತ್ತೊಂದು ಐತಿಹಾಸಿಕ ಹೆಜ್ಜೆ ಇಡಲಾಗಿದೆ. ತಾಂಜೇನಿಯಾದಲ್ಲಿ ಐಐಟಿ – ಮದ್ರಾಸ್ ಕ್ಯಾಂಪಸ್ ಸ್ಥಾಪಿಸಲು ಒಡಂಬಡಿಕೆಗೆ ಸಹಿ ಹಾಕಲಾಗಿದೆ.
ತಾಂಜೇನಿಯಾಕ್ಕೆ ಭೇಟಿ ನೀಡಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಭಾರತದಿಂದ ಹೊರಗೆ ಐಐಟಿ ಕ್ಯಾಂಪಸ್ ಸ್ಥಾಪಿಸಲು ಮುಂದಾಗಿರುವುದು ಜಾಗತಿಕ ದಕ್ಷಿಣಕ್ಕೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಬಣ್ಣಿಸಿದ್ದಾರೆ.
ಪೂರ್ವ ಆಫ್ರಿಕಾದ ಕರಾವಳಿಯ ತಾಂಜೇನಿಯಾ ದ್ವೀಪ ಸಮೂಹವಾದ ಜಾಂಜಿಬಾರ್ ನಲ್ಲಿ ಐಐಟಿ ಮದ್ರಾಸ್ ಕ್ಯಾಂಪಸ್ ಸ್ಥಾಪಿಸಲಾಗುತ್ತಿದ್ದು, ಇದನ್ನು ವಿಶ್ವ ದರ್ಜೆಯ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಾಗಿ ರೂಪಿಸಲಾಗುತ್ತದೆ.