ಬೆಂಗಳೂರು: ಹಳೆಪಿಂಚಣಿ ಮರು ಜಾರಿ ಬಗ್ಗೆ ಅಧ್ಯಯನಕ್ಕೆ ಸಮಿತಿ ರಚಿಸಲಾಗಿದೆ ಎಂದು ವಿಧಾನ ಪರಿಷತ್ ಸಭಾ ನಾಯಕ ಎನ್.ಎಸ್. ಬೋಸರಾಜ್ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ ಜಾರಿಯಲ್ಲಿದೆ. ಇದನ್ನು ರದ್ದುಪಡಿಸುವ ಸಂಬಂಧ ಈಗಾಗಲೇ ಹಳೆ ಪಿಂಚಣಿ ಯೋಜನೆ ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಯೋಜನೆ ಅನುಷ್ಠಾನದ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ 2004ರ ಜನವರಿ 1ರಿಂದ ಎನ್.ಪಿ.ಎಸ್. ಜಾರಿಗೊಳಿಸಿದೆ. ರಾಜ್ಯದಲ್ಲಿ 2006ರ ಏಪ್ರಿಲ್ 1ರಂದು ಮತ್ತು ನಂತರ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ಎನ್.ಪಿ.ಎಸ್. ಜಾರಿಯಾಗಿದೆ. ಎನ್.ಪಿ.ಎಸ್. ರದ್ದುಗೊಳಿಸಿ ಒಪಿಎಸ್ ಮರು ಜಾರಿ ಸಂಬಂಧ ಸರ್ಕಾರ ರಚಿಸಿರುವ ಸಮಿತಿ ಅಧ್ಯಯನ ನಡೆಸಿ ವರದಿ ನೀಡಲಿದ್ದು, ವರದಿಯ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.