ಯೋಜಿಸಿದಂತೆ ಎಲ್ಲಾ ಸುಗಮವಾಗಿ ನೆರವೇರಿದರೆ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಪಾರ್ಕ್ ಅಥವಾ ವಿಜಯನಗರ ಜಿಲ್ಲೆಯ ಹಂಪಿ ಮೃಗಾಲಯದಲ್ಲಿ ಶೀಘ್ರವೇ ನೈಟ್ ಸಫಾರಿ ಜರುಗಲಿದೆ. ಈ ಮೂಲಕ ರಾಜ್ಯದಲ್ಲಿಯೇ ನೈಟ್ ಸಫಾರಿ ಅವಕಾಶ ನೀಡಿದ ಮೊದಲ ಮೃಗಾಲಯ ಎಂಬ ಹೆಗ್ಗಳಿಕೆಗೆ ಹಂಪಿ ಮೃಗಾಲಯ ಪಾತ್ರವಾಗಲಿದೆ.
ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರವಿ ಬಿ ಪಿ ಅವರು ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಸುಳಿವು ನೀಡಿದರು.
ಹೊಸಪೇಟೆ ಮತ್ತು ಹಂಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಷ್ಣಾಂಶ ತುಂಬಾ ಹೆಚ್ಚಿದೆ. ಆದ್ದರಿಂದ ಕೇಂದ್ರ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಮೃಗಾಲಯದಲ್ಲಿ ರಾತ್ರಿ ಸಫಾರಿ ನಡೆಸಬಹುದೇ ಎಂದು ಕೇಳಿದ್ದಾರೆ. ಇದಕ್ಕಾಗಿ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ಆದರೆ ಇದಕ್ಕೂ ಮುನ್ನ ಹಂಪಿಯಲ್ಲಿ ರಾಷ್ಟ್ರಮಟ್ಟದ ಕಾರ್ಯಾಗಾರ ನಡೆಸಬೇಕಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ನೈಟ್ ಸಫಾರಿ ಆರಂಭವಾದರೆ ಅದು ಹಂಪಿ ಮೃಗಾಲಯದಲ್ಲಿಯೇ ಆಗಬೇಕು. ಈ ಬಗ್ಗೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂಪಿಯಲ್ಲಿ ರಾಷ್ಟ್ರಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ನಂತರ ರಾತ್ರಿ ಸಫಾರಿ ಆರಂಭಿಸಲು ವಿಶೇಷ ಅನುಮತಿ ಪಡೆಯಲಾಗುವುದು ಎಂದು ಹೇಳಿದರು.
ಇಡೀ ಕಲ್ಯಾಣ ಕರ್ನಾಟಕದಲ್ಲಿ ಸಫಾರಿ ಮಾಡುವ ಏಕೈಕ ಹಂಪಿ ಮೃಗಾಲಯದ ನಿರ್ಮಾಣವು 2013 ರಲ್ಲಿ ಪ್ರಾರಂಭವಾಗಿ 2017 ರಲ್ಲಿ ಪೂರ್ಣಗೊಂಡಿತು. ಆರಂಭದಲ್ಲಿ ಇದು ಹುಲಿ, ಸಿಂಹ ಮತ್ತು ಚಿರತೆಗಳನ್ನು ಹೊಂದಿರುವ ಮೃಗಾಲಯವಾಗಿತ್ತು.
ಹಂಪಿ ಮೃಗಾಲಯವು 350 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, 700 ಎಕರೆ ಅರಣ್ಯ ಪ್ರದೇಶವನ್ನು ಹೊಂದಿದೆ.