ಟ್ವಿಟರ್ ಗೆ ಪೈಪೋಟಿಯೊಡ್ಡಿದಂತೆ ಇನ್ ಸ್ಟಾಗ್ರಾಂ ಒಡೆತನದ ಮೆಟಾ ಕಂಪನಿ ಥ್ರೆಡ್ಸ್ ಎಂಬ ಹೊಸ ಆಪ್ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಮೆಟಾ ಸಂಸ್ಥೆಯ ಮುಖ್ಯಸ್ಥರಾದ ಮಾರ್ಕ್ ಜುಕರ್ ಬರ್ಗ್ 11 ವರ್ಷದ ನಂತರ ಟ್ವೀಟ್ ಮಾಡಿ ಟ್ವಿಟರ್ ಸಿಇಓ ಎಲಾನ್ ಮಸ್ಕ್ ಕಾಲೆಳೆದಿದ್ದಾರೆ.
ಜುಕರ್ಬರ್ಗ್, ಎಲೋನ್ ಮಸ್ಕ್ ಅನ್ನು ಗುರಿಯಾಗಿಟ್ಟುಕೊಂಡು ತಮಾಷೆಯ ಟ್ವೀಟ್ ಮಾಡುವ ಮೂಲಕ ದಶಕಕ್ಕೂ ಹೆಚ್ಚು ಕಾಲದ ನಂತರ ಟ್ವಿಟರ್ ಗೆ ಮರಳಿದ್ದಾರೆ. ಇಬ್ಬರು ಸ್ಪೈಡರ್ ಮೆನ್ ಪರಸ್ಪರ ಎದುರು ನಿಂತು ಆರೋಪಿಸುತ್ತಿರುವಂತೆ ಕಾಣುವ ಫೋಟೋವನ್ನು ಮಾರ್ಕ್ ಜುಕರ್ ಬರ್ಗ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಈ ಮೂಲಕ ಪರೋಕ್ಷವಾಗಿ ಇಲಾನ್ ಮಸ್ಕ್ ಗೆ ತಿರುಗೇಟು ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. 2012 ರ ಜನವರಿಯಲ್ಲಿ ಮಾರ್ಕ್ ಜುಕರ್ ಬರ್ಗ್ ಕೊನೆಯ ಬಾರಿಗೆ ಟ್ವೀಟ್ ಮಾಡಿದ್ದರು.
ಎಲಾನ್ ಮಸ್ಕ್ ಟ್ವಿಟರ್ ಸಿಇಓ ಆದ ಬಳಿಕ ಹಲವು ಬದಲಾವಣೆ ಮತ್ತು ತಪ್ಪು ನಿರ್ಧಾರಗಳಿಂದ ಭಾರೀ ಟೀಕೆ ಮತ್ತು ವಿರೋಧ ಎದುರಿಸುತ್ತಿದ್ದಾರೆ.
ಮಸ್ಕ್ ಕಳೆದ ಅಕ್ಟೋಬರ್ನಲ್ಲಿ $44 ಶತಕೋಟಿ ಟ್ವಿಟರ್ ಖರೀದಿಸಿದ ನಂತರ ಉದ್ಯೋಗಿಗಳ ವಜಾಗೊಳಿಸುವಿಕೆ, ಟ್ವಿಟರ್ ಲೋಗೋ ಬದಲಾವಣೆ ಸೇರಿದಂತೆ ಹಲವು ನೀತಿಗಳಿಂದ ಹಿನ್ನಡೆ ಅನುಭವಿಸಿದ್ದಾರೆ. ಹಲವು ಬಾರಿ ಟ್ವಿಟರ್ ತಾಂತ್ರಿಕ ತೊಂದರೆ ಎದುರಿಸಿದ್ದು ಇದರಿಂದಾಗಿ ಬಳಕೆದಾರರು ಮತ್ತು ಜಾಹೀರಾತುದಾರರು ನಿರಾಶೆಗೊಂಡಿದ್ದಾರೆ.