ಒಗ್ಗರಣೆ ಹಾಕದೆ ಎಷ್ಟೋ ಅಡುಗೆಗಳು ಕೊನೆಗೊಳ್ಳುವುದಿಲ್ಲ. ಒಗ್ಗರಣೆ, ಅಡುಗೆಯ ಅಲಂಕಾರ ಹೆಚ್ಚಿಸುವುದೇ ಅಲ್ಲದೆ ರುಚಿ ಕೂಡ ಕೊಡುತ್ತದೆ. ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಒಗ್ಗರಣೆಗೆ ಸಾಸಿವೆ ಬಳಸುವುದುಂಟು. ಇನ್ನೂ ಕೆಲವರು ಜೀರಿಗೆ ಒಗ್ಗರಣೆ ಹಾಕುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಆದರೆ ಇಲ್ಲೊಂದು ಕಡೆ ಒಗ್ಗರಣೆಗೆ ಬರೋಬ್ಬರಿ 5 ಪದಾರ್ಥಗಳನ್ನು ಮಿಶ್ರಣ ಮಾಡುತ್ತಾರೆ.
ಹೌದು, ಪಾಂಚ್ ಪೋರನ್ ಎಂದು ಕರೆಯುವ ಬಂಗಾಳಿ ಒಗ್ಗರಣೆ ಡಬ್ಬಿಯ ವಿಷಯ ಇದು. ಪಶ್ಚಿಮ ಬಂಗಾಳದಲ್ಲಿ ಒಗ್ಗರಣೆ ಅಂದರೆ ಕೇವಲ ಸಾಸಿವೆ ಅಥವಾ ಜೀರಿಗೆ ಇಂದ ಆಗುವುದಲ್ಲ. ಪಾಂಚ್ ಎಂದರೆ ಐದು. ಪೋರನ್ ಎಂದರೆ ಮಸಾಲೆಗಳು, 5 ಬಗೆಯ ಮಸಾಲೆಗಳ ಮಿಶ್ರಣವೇ ಪಾಂಚ್ ಪೋರನ್.
ಸಾಸಿವೆ, ಜೀರಿಗೆ, ಮೆಂತ್ಯೆ, ಸೋಂಪು, ಕಪ್ಪು ಜೀರಿಗೆ ಇವಿಷ್ಟರ ಮಿಶ್ರಣವೇ ಪಾಂಚ್ ಪೋರನ್. ಈ ಐದು ಮಸಾಲೆಗಳು ತನ್ನದೇ ಆದ ವಿಶೇಷ ಗುಣಗಳನ್ನು ಹೊಂದಿರುವುದರಿಂದ ಬಂಗಾಳಿ ಅಡುಗೆಗಳಲ್ಲಿ ಕಡ್ಡಾಯವಾಗಿ ಪಾಂಚ್ ಪೋರನ್ ಬಳಸಿಯೇ ಒಗ್ಗರಣೆ ಹಾಕುತ್ತಾರೆ. ನೀವೂ ಸಹ ನಿಮ್ಮ ಒಗ್ಗರಣೆ ಡಬ್ಬಿಯಲ್ಲಿ ಒಂದರ ಬದಲಿಗೆ ಐದು ಮಸಾಲೆಗಳ ಮಿಶ್ರಣದಿಂದ ಒಗ್ಗರಣೆ ಕೊಟ್ಟು ನೋಡಿ.