ಬೆಂಗಳೂರು: ನಾನು ಮೂಢನಂಬಿಕೆ ನಂಬುವುದಿಲ್ಲ. ಚಾಮರಾಜನಗರಕ್ಕೆ ಹೋದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂದಿದ್ದರು. ನಾನು ಮುಖ್ಯಮಂತ್ರಿ ಆಗಿ 12 ಬಾರಿ ಚಾಮರಾಜನಗರಕ್ಕೆ ಹೋಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ನಮ್ಮ ಸರ್ಕಾರ ಬಡವರ ಪರ ಇದೆ. ಹೀಗಾಗಿ 5 ಗ್ಯಾರಂಟಿ ಜಾರಿಗೆ ಮುಂದಾಗಿದ್ದೇವೆ. ಪ್ರತಿಯೊಬ್ಬರೂ ಸಮಾಜದಲ್ಲಿ ಬದುಕಬೇಕು. ನಮ್ಮ ಯೋಜನೆಗಳಿಂದ ಎಲ್ಲಾ ಜಾತಿ, ಧರ್ಮದವರಿಗೆ ಅನುಕೂಲವಾಗಿದೆ ಎಂದು ಹೇಳಿದ್ದಾರೆ.
ನಾನು ಸಾಹಿತಿ ಅಲ್ಲ, ಹಳ್ಳಿಯವನು. ಹಳ್ಳಿ ಭಾಷೆಯಲ್ಲಿ ಹೇಳುತ್ತಿದ್ದೇನೆ. ತಮ್ಮ ಕಾರ್ ಮೇಲೆ ಕಾಗೆ ಕುಳಿತ ಪ್ರಸಂಗವನ್ನು ಸ್ಮರಿಸಿದ ಸಿದ್ದರಾಮಯ್ಯ, ಒಬ್ಬರು ನಾನು ಬಜೆಟ್ ಮಂಡಿಸಲ್ಲ, ಕುರ್ಚಿ ಕಳೆದುಕೊಳ್ಳುತ್ತಾರೆ ಎಂದರು. ಇನ್ನೊಬ್ಬರು ಬಜೆಟ್ ಮಂಡಿಸಿದ ಮೇಲೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದರು. ಆದರೆ, ಮೌಢ್ಯದ ಕಾಗೆ ಹಾರಿಸಿದವರು ನಾಪತ್ತೆಯಾದರು ಎಂದು ಹೇಳಿದ್ದಾರೆ.
ಕಾಗೆ ಕುಳಿತ ನಂತರವೂ ಎರಡು ಬಜೆಟ್ ಮಂಡಿಸಿ ಅಧಿಕಾರ ನಿರ್ವಹಿಸಿದೆ. ಆದ್ದರಿಂದ ಮೌಲ್ಯವನ್ನು ನಂಬಬೇಡಿ. ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆ ಮಾಡಿದ್ದಾರೆ. ನಾವು ಮನುಷ್ಯರಾಗಿ ಬದುಕಿ ಸಮಾಜದಲ್ಲಿ ಪರಿವರ್ತನೆ ತರಬೇಕು ಎಂದು ತಿಳಿಸಿದ್ದಾರೆ.
ಬಸವಣ್ಣನವರು ಕೆಳ ವರ್ಗದ ಜನರ ಪರವಾಗಿ ಕೆಲಸ ಮಾಡಿದ್ದರು. ಅಸಮಾನತೆ ಇದ್ದರೆ ಸಮಾಜದಲ್ಲಿ ಸಾಮರಸ್ಯ ಇರುವುದಿಲ್ಲ. ಹೀಗಾಗಿ ಬಸವಣ್ಣನವರು ಅನುಭವ ಮಂಟಪ ನಿರ್ಮಾಣ ಮಾಡಿದರು. ಅಂಬೇಡ್ಕರ್ ಸಂವಿಧಾನ ಬರೆಯದಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ನಾನು ಎಮ್ಮೆ ಕಾಯುತ್ತಾ ಇರುತ್ತಿದ್ದೆ. ತಂಗಡಗಿ ಕಲ್ಲು ಒಡೆಯುತ್ತಿದ್ದ ಎಂದು ಹೇಳಿದ್ದಾರೆ.