ಬೆಂಗಳೂರು: ಸಿನಿಮಾ ಮಾಡುವುದಾಗಿ ಮುಂಗಡ ಹಣ ಪಡೆದುಕೊಂಡಿದ್ದ ನಟ ಸುದೀಪ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಚಿತ್ರ ನಿರ್ಮಾಪಕ ಎನ್.ಎಂ. ಕುಮಾರ್ ಆರೋಪಿಸಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುದೀಪ್ ಅವರೊಂದಿಗೆ ಅನೇಕ ಸಿನಿಮಾ ಮಾಡಿದ್ದೇನೆ. 8 ವರ್ಷದಿಂದ ಅವರೊಂದಿಗೆ ಸಿನಿಮಾ ಮಾಡಬೇಕಿತ್ತು. ‘ಮುತ್ತತ್ತಿ ಸತ್ಯರಾಜ್’ ಎನ್ನುವ ಚಿತ್ರ ಮಾಡಲು ಸುದೀಪ್ ಒಪ್ಪಿಕೊಂಡಿದ್ದು, ಅಡ್ವಾನ್ಸ್ ಪಡೆದುಕೊಂಡಿದ್ದರು. ಮತ್ತೊಬ್ಬರಿಗೆ ಅಡ್ವಾನ್ಸ್ ಕೂಡ ಕೊಡಿಸಿದ್ದರು. ನಿರ್ದೇಶಕ ನಂದಕಿಶೋರ್ ಅವರನ್ನು ಸುದೀಪ್ ಅವರೇ ಕರೆಸಿದ್ದರು. ಹೈದರಾಬಾದ್ ನಿಂದ ರೈಟರ್ ಕರೆಸಿ ಎಂದು ಹೇಳಿದ್ದರು. ರೈಟರ್ ಕರೆಸಿದರೆ ಅವರು ಭೇಟಿ ಮಾಡಲಿಲ್ಲ. ಮನೆ ಬಳಿ ಹೋದರೆ ಮಾತನಾಡಲು ಸಿಗುವುದಿಲ್ಲ ಎಂದು ಸುದೀಪ್ ವಿರುದ್ಧ ಆರೋಪ ಮಾಡಿದ್ದಾರೆ.
ನಿರ್ಮಾಪಕರೇ ದುಡ್ಡು ಕೊಟ್ಟು ಬೇಡುವ ಪರಿಸ್ಥಿತಿ ಬಂದಿದೆ. ನಾನು 200 ಸಿನಿಮಾಗಳನ್ನು ರಿಲೀಸ್ ಮಾಡಿದ್ದೇನೆ. ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. ಸುದೀಪ್ ಅವರು ಸಿನಿಮಾ ಮಾಡುವುದಾಗಿ ಹೇಳಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ದೂರಿದ್ದಾರೆ.
‘ಮುಕುಂದ ಮುರಾರಿ’, ಸಿನಿಮಾಗಿಂತ ಮೊದಲೇ ಅವರಿಗೆ ಹಣ ಕೊಟ್ಟಿದ್ದೆ. ‘ಪೈಲ್ವಾನ್’ ಮತ್ತು ‘ಕೋಟಿಗೊಬ್ಬ 3’ ಮುಗಿದ ಮೇಲೆ ಸಿನಿಮಾ ಮಾಡುವುದಾಗಿ ಹೇಳಿದ್ದರು. ನಂತರ ‘ವಿಕ್ರಾಂತ್ ರೋಣ’ ಆದ ಮೇಲೆ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ, ಆ ಚಿತ್ರ ಬಿಡುಗಡೆಯಾಗಿ ವರ್ಷ ಕಳೆದರೂ ಯಾವುದೇ ಸ್ಪಂದನೆ ಇಲ್ಲ ಎಂದು ಹೇಳಿದ್ದಾರೆ.
ಸುದೀಪ್ ಅವರು ಫಿಲಂ ಚೇಂಬರ್ ಗೆ ಬಂದು ಸಮಸ್ಯೆಯನ್ನು ಇತ್ಯರ್ಥ ಮಾಡಿಕೊಳ್ಳಲಿ. ಇಲ್ಲವಾದರೆ ಬುಧವಾರದವರೆಗೆ ಕಾದು ಫಿಲಂ ಚೇಂಬರ್ ನಲ್ಲಿ ಏನು ತೀರ್ಮಾನ ಮಾಡುತ್ತಾರೆ ಎಂದು ನೋಡುತ್ತೇನೆ. ಸುದೀಪ್ ಮನೆ ಮುಂದೆ ನ್ಯಾಯಕ್ಕಾಗಿ ಧರಣಿ ಕೂರುತ್ತೇನೆ ಎಂದು ಎನ್.ಎಂ. ಕುಮಾರ್ ಹೇಳಿದ್ದಾರೆ.