2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿರುವ ಆರ್ಬಿಐ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಮೇ 30 ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಆದೇಶವನ್ನು ಕಾಯ್ದಿರಿಸಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣ್ಯ ಪ್ರಸಾದ್ ಅವರ ಪೀಠವು ಮನವಿಯನ್ನು ತಿರಸ್ಕರಿಸಿದೆ.
2 ಸಾವಿರ ರೂ. ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)ಗೆ ಯಾವುದೇ ಅಧಿಕಾರವಿಲ್ಲ. ಕೇಂದ್ರ ಮಾತ್ರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದಿತ್ತು ಎಂದು ಅರ್ಜಿದಾರ ರಜನೀಶ್ ಭಾಸ್ಕರ್ ಗುಪ್ತಾ ಪ್ರತಿಪಾದಿಸಿದ್ದರು.
ಅರ್ಜಿದಾರರು ತಮ್ಮ ಮನವಿಯಲ್ಲಿ, ಆರ್ಬಿಐಗೆ ಯಾವುದೇ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಅಥವಾ ಸ್ಥಗಿತಗೊಳಿಸುವುದಕ್ಕೆ ನಿರ್ದೇಶಿಸಲು ಯಾವುದೇ ಸ್ವತಂತ್ರ ಅಧಿಕಾರವಿಲ್ಲ. ಈ ಅಧಿಕಾರವು ಆರ್ಬಿಐನ ಕಾಯಿದೆ 1934 ಸೆಕ್ಷನ್ 24 (2) ರ ಅಡಿಯಲ್ಲಿ ಕೇಂದ್ರಕ್ಕೆ ಮಾತ್ರ ಇದೆ ಎಂದು ಹೇಳಿದ್ದರು.
ಈ ಮನವಿಯನ್ನು ಆರ್ಬಿಐ ವಿರೋಧಿಸಿದ್ದು ಚಲಾವಣೆಯಿಂದ 2 ಸಾವಿರ ರೂ. ನೋಟುಗಳನ್ನು ಮಾತ್ರ ಹಿಂತೆಗೆದುಕೊಳ್ಳುವುದಾಗಿ ಹೇಳಿದ್ದು, ಇದು ಕರೆನ್ಸಿ ನಿರ್ವಹಣೆಯ ಮತ್ತು ಆರ್ಥಿಕ ನೀತಿಯ ವಿಷಯವಾಗಿದೆ ಎಂದಿದೆ.
ಮೇ 19 ರಂದು ಆರ್ಬಿಐ 2 ಸಾವಿರ ರೂ. ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಿಸಿತ್ತು. ಮತ್ತು ಚಲಾವಣೆಯಲ್ಲಿರುವ ನೋಟುಗಳನ್ನು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಬಹುದು ಅಥವಾ ಸೆಪ್ಟೆಂಬರ್ 30 ರೊಳಗೆ ವಿನಿಮಯ ಮಾಡಿಕೊಳ್ಳಬಹುದು ಎಂದು ಹೇಳಿದೆ.