ಮಧ್ಯಪ್ರದೇಶದ ರೇವಾ ಜಿಲ್ಲೆಯ ಮನೆಯೊಂದರಲ್ಲಿ ಪತ್ನಿಯ ಶವವನ್ನ ಫ್ರೀಜರ್ ನಲ್ಲಿ ಇರಿಸಲಾಗಿದ್ದು, ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನ್ನ ಭಾವ, ಸೋದರಿಯನ್ನ ಹತ್ಯೆ ಮಾಡಿ ಶವವನ್ನ ಫ್ರೀಜರ್ ನಲ್ಲಿ ಇರಿಸಿದ್ದಾರೆಂದು ಮೃತಳ ಸೋದರ ಪೊಲೀಸರಿಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಆದರೆ ತನ್ನ ಹೆಂಡತಿ ಜಾಂಡೀಸ್ ನಿಂದ ಮೃತಪಟ್ಟಿದ್ದು, ಅಂತ್ಯಕ್ರಿಯೆಗಾಗಿ ಮಗ ಮುಂಬೈನಿಂದ ವಾಪಸ್ ಬರುವವರೆಗೆ ಫ್ರೀಜರ್ ನಲ್ಲಿ ಇಟ್ಟಿದ್ದಾಗಿ ಪತಿ ಹೇಳಿದ್ದಾರೆ. ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಮಹಿಳೆಯ ಸಾವಿಗೆ ಕಾರಣ ತಿಳಿಯಲು ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಸುಮಿತ್ರಿ ಎಂದು ಗುರುತಿಸಲಾದ 40 ವರ್ಷದ ಮಹಿಳೆಯ ಶವವನ್ನು ನಾವು ವಶಪಡಿಸಿಕೊಂಡಿದ್ದೇವೆ. ಆಕೆಯ ಸಹೋದರ ಅಭಯ್ ತಿವಾರಿ ತನ್ನ ಭಾವ, ಸೋದರಿಯನ್ನು ಕೊಂದಿದ್ದಾರೆ ಎಂದು ನಮಗೆ ದೂರು ನೀಡಿದ ನಂತರ ನಾವು ಶವವನ್ನು ಪಡೆದುಕೊಂಡಿದ್ದೇವೆ ಎಂದು ಸಿಟಿ ಕೊತ್ವಾಲಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಹೇಳಿದ್ದಾರೆ. ಮೃತ ಮಹಿಳೆಯ ಪತಿ ಭರತ್ ಮಿಶ್ರಾ , ತಮ್ಮ ಮಗ ಅಂತ್ಯಕ್ರಿಯೆಗಾಗಿ ಮುಂಬೈನಿಂದ ಮನೆಗೆ ಬರುವವರೆಗೆ ಶವವನ್ನು ತಮ್ಮ ಮನೆಯಲ್ಲಿ ಫ್ರೀಜರ್ನಲ್ಲಿ ಇರಿಸಿದ್ದಾಗಿ ಹೇಳಿದ್ದಾರೆ .ಮಹಿಳೆ ಜಾಂಡೀಸ್ ನಿಂದ ಬಳಲುತ್ತಿದ್ದು ಜೂನ್ 30 ರಂದು ಸಾವನ್ನಪ್ಪಿದರು ಎಂದು ಅವರ ಪತಿ ನಮಗೆ ಹೇಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಭಾವ ಅಥವಾ ಅವರ ಕುಟುಂಬದವರು ತಮ್ಮ ಸಹೋದರಿಯ ಸಾವಿನ ಬಗ್ಗೆ ತಮಗಾಗಲೀ ಅಥವಾ ತಮ್ಮ ಸಂಬಂಧಿಕರಿಗಾಗಲೀ ತಿಳಿಸಿರಲಿಲ್ಲ ಎಂದು ತಿವಾರಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಭರತ್ ಮಿಶ್ರಾ ತನ್ನ ಸಹೋದರಿಯನ್ನು ಥಳಿಸುತ್ತಿದ್ದರು ಮತ್ತು ಇದರಿಂದ ಅವರು ಸಾವನ್ನಪ್ಪಿರಬಹುದು ಎಂದು ದೂರುದಾರರು ಆರೋಪಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.