ವಾಟ್ಸಾಪ್ ಗ್ರೂಪ್ ನಿಂದ ನಿಮ್ಮನ್ನು ತೆಗೆದುಹಾಕಿದರೆ ಏನು ಮಾಡ್ತೀರಾ? ನೀವು ಅವರನ್ನು ಕಾರಣ ಕೇಳಬಹುದು ಅಥವಾ ಸಿಟ್ಟಿನಿಂದ ಸುಮ್ಮನಾಗಬಹುದು. ಇಲ್ಲವೇ ನಿಮ್ಮನ್ನು ಗ್ರೂಪ್ ನಿಂದ ತೆಗೆದ ವ್ಯಕ್ತಿಯ ನಂಬರನ್ನ ಬ್ಲಾಕ್ ಮಾಡಬಹುದು. ಆದರೆ ಉಗಾಂಡದಲ್ಲಿ ವ್ಯಕ್ತಿಯೊಬ್ಬರು ತಮ್ಮನ್ನು ವಾಟ್ಸಾಪ್ ಗ್ರೂಪಿನಿಂದ ತೆಗೆದುಹಾಕಿದ್ದಕ್ಕೆ ಕೋರ್ಟ್ ಮೊರೆ ಹೋಗಿದ್ದಾರೆ.
ಹರ್ಬರ್ಟ್ ಬೈಟ್ವಾಬಾಬೊ ಎಂಬ ಉಗಾಂಡಾದ ವ್ಯಕ್ತಿ ವಾಟ್ಸಾಪ್ ಗುಂಪಿನಿಂದ ತೆಗೆದುಹಾಕಲ್ಪಟ್ಟ ನಂತರ ನ್ಯಾಯಾಲಯದ ಮೊರೆ ಹೋಗಿದ್ದಾನೆ. ದೂರುದಾರನ ಮಾತುಗಳನ್ನು ಆಲಿಸಿದ ನ್ಯಾಯಾಲಯವು ಅಡ್ಮಿನ್ ಅವರಿಗೆ ಮತ್ತೆ ಗ್ರೂಪ್ ಗೆ ಸೇರಿಸುವಂತೆ ಸೂಚಿಸಿತು. ಆದಾಗ್ಯೂ ಅನಿರೀಕ್ಷಿತ ಘಟನೆ ಸಂಭವಿಸಿತು.
ಹರ್ಬರ್ಟ್ ಮತ್ತೆ ಗ್ರೂಪಿಗೆ ಸೇರಿಕೊಂಡ ನಂತರ ಉಳಿದ ಸದಸ್ಯರೆಲ್ಲಾ ಗ್ರೂಪ್ ತೊರೆದರು. ಬರ್ಬರ್ಟ್ ಅವರನ್ನು ಹೊರಗಿಟ್ಟು ಮತ್ತೊಂದು ಗ್ರೂಪ್ ಮಾಡಿಕೊಂಡರು. ಇದು ಮತ್ತೆ ಅವರನ್ನು ನ್ಯಾಯಾಲಯಕ್ಕೆ ಹೋಗುವಂತೆ ಮಾಡಿದೆ ಎಂದು ವರದಿಯಾಗಿದೆ.
ಮಕಿಂಡಿಯ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಿದಂತೆ “ಬುಯಾಂಜಾ ಮೈ ರೂಟ್ಸ್” ಎಂಬುದು ವಾಟ್ಸಾಪ್ ಗ್ರೂಪಿನ ಹೆಸರು.
ವರದಿಗಳ ಪ್ರಕಾರ ವಾಟ್ಸಾಪ್ ಗ್ರೂಪ್ ಅನ್ನು ದತ್ತಿ ಕೊಡುಗೆಗಳಿಗಾಗಿ ರಚಿಸಲಾಗಿದೆ. ಸಂತಾಪ ಸೂಚಿಸಲು ಮತ್ತು ಉಗಾಂಡಾದ ರುಕುನ್‌ಗಿರಿ ಜಿಲ್ಲೆಯ ಬುಯಾಂಜಾ ಉಪ-ಕೌಂಟಿಯ ನಿವಾಸಿಗಳಿಗೆ ಬೆಂಬಲವನ್ನು ನೀಡಲು ರಚಿಸಲಾಗಿದೆ. ಹರ್ಬರ್ಟ್ ಮತ್ತು ಇತರ ಸದಸ್ಯರು ಸದಸ್ಯತ್ವ ಶುಲ್ಕ ಪಾವತಿ ನೋಂದಣಿ ಮಾಡಿಸಿಕೊಂಡಿದ್ದರು.
2017 ರಲ್ಲಿ ಗ್ರೂಪ್ ಸ್ಥಾಪನೆಯಾದಾಗಿನಿಂದ ಅದರ ನಿರ್ವಹಣೆ ಮತ್ತು ಲೆಕ್ಕ ಪರಿಶೋಧನೆಯಂತಹ ಕೆಲವು ವಿವರಗಳನ್ನು ಹರ್ಬರ್ಟ್ ಪ್ರಶ್ನಿಸಿದಾಗ ಸರಿಯಾದ ಉತ್ತರ ಸಿಕ್ಕಿಲ್ಲ. ಮೇ 2023 ರಂದು ಅಡ್ಮಿನ್ ಅಸಿಂಗುಜಾ ಅವರು ಬರ್ಬರ್ಟ್ ಅವರನ್ನು ಗುಂಪಿನಿಂದ ತೆಗೆದುಹಾಕಿದ್ದಾರೆ. ಇದರಿಂದಾಗಿ ಅವರು ನ್ಯಾಯಾಲಯಕ್ಕೆ ತೆರಳಿದರು.
ಅಂತಹ ಕ್ರಮಗಳು ವ್ಯಕ್ತಿಯ ಹಕ್ಕು ಮತ್ತು ಸಂಘದ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಕೋರ್ಟ್ ಹೇಳಿದೆ.