
ಬೆಂಗಳೂರಿನ ವ್ಯಕ್ತಿಯೊಬ್ಬರು ಕಾರನ್ನು ತಮ್ಮ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸದಂತೆ ಕಾರ್ ಮಾಲೀಕರಿಗೆ ಮನವಿ ಮಾಡುತ್ತಾ ಕಾರಿನ ಕಿಟಕಿಯ ಮೇಲೆ ಹಾಕಿರುವ ಟಿಪ್ಪಣಿ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.
ಟ್ವಿಟ್ಟರ್ ಬಳಕೆದಾರ ಸುಭಾಸಿಸ್ ದಾಸ್ ಅವರು ಟಿಪ್ಪಣಿ ಬರೆದಿರುವ ವ್ಯಕ್ತಿಯ ಸಭ್ಯ ವಿಧಾನವನ್ನ ಮೆಚ್ಚಿಕೊಂಡು ಅದನ್ನು ಪೋಸ್ಟ್ ಮಾಡಿದ್ದಾರೆ. ಕೋರಮಂಗದಲ್ಲಿ ಈ ಟಿಪ್ಪಣಿ ಕಂಡಿದ್ದಾಗಿ ಅವರು ತಿಳಿಸಿದ್ದಾರೆ.
ಟಿಪ್ಪಣಿಯಲ್ಲಿ “ಹಾಯ್, ದಯವಿಟ್ಟು ನಿಮ್ಮ ಕಾರನ್ನು ಇಲ್ಲಿ ನಿಲ್ಲಿಸಬೇಡಿ !! ಹಾಗೆ ಮಾಡಬೇಡಿ ಎಂದು ಮೊದಲೇ ಮನವಿ ಮಾಡಿದ್ದೆವು. ನಾವು 2000ನೇ ಇಸವಿಯಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ ಮತ್ತು 2 ಕಾರುಗಳನ್ನು ಹೊಂದಿದ್ದೇವೆ ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಆದ್ದರಿಂದ ನಮಗೆ ಉತ್ತಮ ಪಾರ್ಕಿಂಗ್ ಸ್ಥಳದ ಅಗತ್ಯವಿದೆ. ದಯವಿಟ್ಟು ನಿಮ್ಮ ಹಿಂದಿನ ಪಾರ್ಕಿಂಗ್ ಸ್ಥಳಕ್ಕೆ ಹಿಂತಿರುಗಿ. ನಾವು ಒಳ್ಳೆಯ ಮತ್ತು ಬೆಂಬಲ ನೀಡುವ ನೆರೆಹೊರೆಯವರಾಗೋಣ ಧನ್ಯವಾದ ಇಂತಿ ನಿಮ್ಮ ನೆರೆಹೊರೆಯವರು” ಎಂದು ಬರೆಯಲಾಗಿದೆ.
ಈ ರೀತಿಯ ಮನವಿ ವಿಧಾನವನ್ನು ಮೆಚ್ಚಿಕೊಂಡಿರುವ ನೆಟ್ಟಿಗರು ಅಂತಹ ಪರಿಸ್ಥಿತಿಯಲ್ಲಿ ದೆಹಲಿ ಅಥವಾ ಗುರಗಾಂವ್ ನಿವಾಸಿಗಳು ಹೇಗೆ ವರ್ತಿಸುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.