ಬಳ್ಳಾರಿ : ಬಕ್ರೀದ್ ಹಬ್ಬದ ನಿಮಿತ್ತ ಜಿಲ್ಲೆಯಲ್ಲಿ ಅನಧೀಕೃತ ಗೋವು, ಒಂಟೆಗಳ ಸಾಗಾಣಿಕೆ ಮತ್ತು ವಧೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಎಸ್.ಎನ್.ರುದ್ರೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ದೇಶದಲ್ಲೆಡೆ ಅನಧಿಕೃತ ಗೋವು, ಒಂಟೆಗಳ ಸಾಗಾಣಿಕೆ ಮತ್ತು ವಧೆಯನ್ನು ನಿಷೇಧಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬಕ್ರಿದ್ ಹಬ್ಬದ ಅಚರಣೆ ಪ್ರಯುಕ್ತ ಅಕ್ರಮ ಗೋವು, ಒಂಟೆಗಳ ಸಾಗಾಣಿಕೆ ಮತ್ತು ವಧೆಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಸಂಬಂಧಪಟ್ಟ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.
ಜಿಲ್ಲೆಯಾದ್ಯಂತ ಇರುವ ಚೆಕ್ ಪೋಸ್ಟ್ ಗಳಲ್ಲಿ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಮತ್ತು ಆರ್.ಟಿ.ಓ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸಿ ಕಟ್ಟುನಿಟ್ಟಿನ ನಿಗಾವಹಿಸಲು ಸೂಚಿಸಿದ್ದಾರೆ. ಆದ್ದರಿಂದ ಅಕ್ರಮ ಗೋವು, ಒಂಟೆಗಳ ಸಾಗಾಣಿಕೆ ಮತ್ತು ವಧೆ ಕಂಡುಬಂದಲ್ಲಿ ಸಾರ್ವಜನಿಕರು ಪಶುಸಂಗೋಪನಾ ಇಲಾಖೆ ಅಥವಾ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಅವರು ತಿಳಿಸಿದ್ದಾರೆ.