ಬೆಂಗಳೂರು: ‘ಕೆಜಿಎಫ್ 2’ ಹಾಡಿನ ಕಾಪಿ ರೈಟ್ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ರಾಹುಲ್ ಗಾಂಧಿ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಿರಾಕರಿಸಿದೆ.
ಕಾಂಗ್ರೆಸ್ ಪಕ್ಷದಿಂದ ‘ಕೆಜಿಎಫ್ 2’ ಹಾಡಿನ ದುರ್ಬಳಕೆ ಆರೋಪ ಕೇಳಿ ಬಂದಿತ್ತು. ಎಂಆರ್ಟಿ ಮ್ಯೂಸಿಕ್ ನಿಂದ ದೂರು ದಾಖಲಿಸಲಾಗಿತ್ತು. ಭಾರತ್ ಜೋಡೋ ಯಾತ್ರೆಯ ವೇಳೆ ‘ಕೆಜಿಎಫ್ 2’ ಹಾಡಿನ ಬಳಕೆ ಆರೋಪ ಕೇಳಿ ಬಂದಿತ್ತು. ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮೊದಲಾದವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಈ ಸಂಬಂಧ ಪ್ರಕರಣ ರದ್ದು ಕೋರಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರನ್ನ ಒಳಗೊಂಡ ಏಕಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿದ್ದು, ರಾಹುಲ್ ಗಾಂಧಿ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಿರಾಕರಿಸಿದೆ. ಜೈ ರಾಮ್ ರಮೇಶ್ , ಸುಪ್ರಿಯಾ ಸುಳೆ ವಿರುದ್ಧ ಕೂಡ ತನಿಖೆ ನಡೆಸಲು ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ವಿಕ್ರಮ್ ಹುಯಿಲ್ಗೋಲ್ ಅವರು, ಕೃತಿಸ್ವಾಮ್ಯ ಕಾಯ್ದೆಯ ಸೆಕ್ಷನ್ 63 ಉಲ್ಲಂಘನೆಯ ಮಿತಿಯನ್ನು ಹೊಂದಿದೆ ಎಂದು ವಾದಿಸಿದ್ದರು. . ದೂರುದಾರ ಎಂ.ನವೀನ್ ಕುಮಾರ್ ಪರ ಹಿರಿಯ ವಕೀಲ ಎಸ್.ಶ್ರೀರಂಗ ಮತ್ತು ವಕೀಲ ಪ್ರಣವ್ ಕುಮಾರ್ ಮೈಸೂರು ವಾದ ಮಂಡಿಸಿದರು.