BIG NEWS:‌ ಚೀನಾಗೆ ಸೆಡ್ಡು ಹೊಡೆದ ಭಾರತ; ಅತಿ ದೊಡ್ಡ ರಸ್ತೆ ಜಾಲ ಹೊಂದಿರೋ ಜಗತ್ತಿನ 2ನೇ ದೇಶವೆಂಬ ಹೆಗ್ಗಳಿಕೆ…!

ಅಮೆರಿಕವನ್ನು ಹೊರತುಪಡಿಸಿದರೆ ಅತಿ ದೊಡ್ಡ ರೋಡ್‌ ನೆಟ್ವರ್ಕ್‌ ಹೊಂದಿರುವ ರಾಷ್ಟ್ರ ಭಾರತ. 2014 ರಿಂದೀಚೆಗೆ 1.45 ಲಕ್ಷ ಕಿಮೀ ರಸ್ತೆ ನಿರ್ಮಾಣದ ಮೂಲಕ ಭಾರತ, ಚೀನಾವನ್ನು ಹಿಂದಿಕ್ಕಿದೆ. ಎರಡನೇ ಸ್ಥಾನಕ್ಕೆ ಏರಿದೆ. ತಮ್ಮ ಅಧಿಕಾರಾವಧಿಯಲ್ಲಿ ಈ ನಿಟ್ಟಿನಲ್ಲಿ ಮಾಡಿದ ಸಾಧನೆಗಳನ್ನು ಬಿಚ್ಚಿಟ್ಟ ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಭಾರತ ಅತಿ ದೊಡ್ಡ ರಸ್ತೆ ಸಂಪರ್ಕ ಜಾಲ ಹೊಂದಿರುವ ಜಗತ್ತಿನ ಎರಡನೇ ರಾಷ್ಟ್ರ ಎಂದರು.

ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ಅನೇಕ ಎಕ್ಸ್‌ಪ್ರೆಸ್‌ವೇಗಳು ನಿರ್ಮಾಣವಾಗಿವೆ. ಭಾರತದಲ್ಲೇ ಅತಿ ಉದ್ದದ ಹೆದ್ದಾರಿ ಎನಿಸಿಕೊಂಡಿರೋ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಕೂಡ ಬಹುತೇಕ ಮುಗಿದಿದೆ. 9 ವರ್ಷಗಳ ಹಿಂದೆ ಭಾರತದ ರಸ್ತೆ ಸಂಪರ್ಕ ಜಾಲ 91,287 ಕಿಮೀಗಳಿಷ್ಟಿತ್ತು. ನಿತಿನ್‌ ಗಡ್ಕರಿ ಅವರ ಅಧಿಕಾರಾವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನೇಕ ಹೈವೇಗಳು ಹಾಗೂ ಎಕ್ಸ್‌ಪ್ರೆಸ್‌ವೇ ಗಳನ್ನು ನಿರ್ಮಾಣ ಮಾಡಿದೆ.

2019ರ ಎಪ್ರಿಲ್‌ನಿಂದೀಚೆಗೆ ದೇಶಾದ್ಯಂತ 30,000 ಕಿಮೀಗಳಿಗೂ ಅಧಿಕ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗಿದೆ. ದೆಹಲಿ ಮತ್ತು ಮೀರತ್‌ ನಡುವಣ ಸಂಪರ್ಕ ಹೈವೇ, ಉತ್ತರ ಪ್ರದೇಶದ ಲಖ್ನೋ ಮತ್ತು ಗಾಝಿಪುರ ಹೈವೇ ಕೂಡ ಇವುಗಳಲ್ಲೊಂದು.

ತಮ್ಮ ಅಧಿಕಾರಾವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಮಾರು 7 ವಿಶ್ವ ದಾಖಲೆಗಳನ್ನು ಮಾಡಿದೆ ಎಂದು ಗಡ್ಕರಿ ತಿಳಿಸಿದ್ದಾರೆ. ಈ ವರ್ಷ ಮೇನಲ್ಲಿ 100 ಕಿಮೀ ಎಕ್ಸ್‌ಪ್ರೆಸ್‌ವೇಯನ್ನು ಕೇವಲ 100 ಗಂಟೆಗಳಲ್ಲಿ ನಿರ್ಮಾಣ ಮಾಡಲಾಗಿತ್ತು.

ಗಾಝಿಯಾಬಾದ್‌-ಅಲಿಗಢ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ವೇಳೆ ಈ ದಾಖಲೆ ಮಾಡಿರೋದು ವಿಶೇಷ. ಎನ್‌ಎಚ್‌ 53ರಲ್ಲಿ 75 ಕಿಮೀ ಕಾಂಕ್ರೀಟ್‌ ರಸ್ತೆಯನ್ನ ಕೇವಲ 105 ಗಂಟೆ 33 ನಿಮಿಷಗಳಲ್ಲಿ ಪೂರ್ಣಗೊಳಿಸುವ ಮೂಲಕ ಗಿನ್ನಿಸ್‌ ದಾಖಲೆಗೂ ಪ್ರಾಧಿಕಾರ ಪಾತ್ರವಾಗಿದೆ.

ತಮ್ಮ ಅವಧಿಯಲ್ಲಿ ಹೆದ್ದಾರಿಗಳಿಂದ ಬರುವ ಆದಾಯ ಕೂಡ ಹೆಚ್ಚಳವಾಗಿದೆ ಎಂದು ಗಡ್ಕರಿ ಹೇಳಿಕೊಂಡಿದ್ದಾರೆ. 9 ವರ್ಷಗಳ ಹಿಂದೆ ಕೇವಲ 4777 ಕೋಟಿ ರೂಪಾಯಿ ಇದ್ದ ಟೋಲ್‌ ಸಂಗ್ರಹ ಈಗ 41,342 ಕೋಟಿಗಳಿಗೆ ಏರಿಕೆಯಾಗಿದೆ. ಟೋಲ್‌ ಆದಾಯವನ್ನು 1.30 ಲಕ್ಷ ಕೋಟಿಗೆ ಏರಿಸುವುದು ಸರ್ಕಾರದ ಗುರಿ ಎಂದು ಗಡ್ಕರಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read