ದೇಶಾದ್ಯಂತ ಹಣದುಬ್ಬರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬೇಸಿಗೆ ಮುಗಿಯುತ್ತಿದ್ದಂತೆ ತರಕಾರಿ ಬೆಲೆ ಬಹಳಷ್ಟು ದುಬಾರಿಯಾಗಿದೆ. ಸಾರ್ವಜನಿಕರ ಜೇಬಿಗೆ ನೇರವಾಗಿ ಪೆಟ್ಟು ಬೀಳುತ್ತಿದೆ. ಬಹುತೇಕ ಕಡೆಗಳಲ್ಲಿ ಟೊಮೆಟೊ ಬೆಲೆ ದುಪ್ಪಟ್ಟಾಗಿದೆ. ಚಿಲ್ಲರೆ ವ್ಯಾಪಾರದಲ್ಲಿ ಟೊಮೆಟೊ ದರ ಕೆಜಿಗೆ 80 ರಿಂದ 120 ರೂಪಾಯಿಗೆ ಏರಿಕೆಯಾಗಿದೆ. ಇದಲ್ಲದೇ ಸಗಟು ಮಾರುಕಟ್ಟೆಯಲ್ಲಿ ಟೊಮೇಟೊ ಬೆಲೆ ಕೆಜಿಗೆ 30-35 ರಿಂದ 65-70 ರೂಪಾಯಿಗೆ ಏರಿದೆ.
ಏಕಾಏಕಿ ಸುರಿದ ಮಳೆಯಿಂದಾಗಿ ತರಕಾರಿ ಬೆಲೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. ಕೆಜಿಗೆ ಕೇವಲ 20-25 ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೆಟೊ ಬೆಲೆ ಈಗ ಮಾರುಕಟ್ಟೆಯಲ್ಲಿ ಕೆಜಿಗೆ 120 ರೂಪಾಯಿಗೆ ತಲುಪಿದೆ. ಕಳೆದ 4 ರಿಂದ 5 ದಿನಗಳಲ್ಲಿ ಟೊಮೆಟೊ ಬೆಲೆ 4 ಪಟ್ಟು ಹೆಚ್ಚಾಗಿದೆ. ಟೊಮೆಟೊ ಜತೆಗೆ ಇನ್ನೂ ಹಲವು ತರಕಾರಿಗಳ ಬೆಲೆಯೂ ಏರಿಕೆಯಾಗಿದೆ. ಮಳೆಗಾಲದ ವಿಳಂಬ ಮತ್ತು ಅತಿಯಾದ ಶಾಖದಿಂದಾಗಿ, ಟೊಮೆಟೊ ಬೆಲೆಯಲ್ಲಿ ಏರಿಕೆಯಾಗುತ್ತಿದೆ.
ಇದಲ್ಲದೇ ರೈತರಲ್ಲಿ ಕೃಷಿಯತ್ತ ಆಸಕ್ತಿ ಕಡಿಮೆಯಾಗುತ್ತಿರುವ ಪರಿಣಾಮ ಬೆಳೆಯ ಕೊರತೆ ಕಂಡು ಬರುತ್ತಿದೆ. ದೆಹಲಿಯಲ್ಲಿ ಕಳೆದ 2 ದಿನಗಳಲ್ಲಿ ಟೊಮೆಟೊ ಬೆಲೆ ದ್ವಿಗುಣಗೊಂಡಿದೆ. ಬೆಂಗಳೂರಲ್ಲೂ ಟೊಮೆಟೋ ಬೆಲೆ 100 ರೂಪಾಯಿ ದಾಟಿದೆ. ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಟೊಮೆಟೊ ಪೂರೈಕೆ ಕಡಿಮೆಯಾಗಿದ್ದು, ಬೆಲೆಯೂ ಏರಿಕೆಯಾಗುತ್ತಿದೆ. ಬಹುತೇಕ ಕಡೆಗಳಿಗೆ ಬೆಂಗಳೂರಿನಿಂದ ಟೊಮೆಟೊ ಪೂರೈಕೆಯಾಗುತ್ತಿತ್ತು. ಆದರೆ ಮಳೆಯಿಂದಾಗಿ ಟೊಮೆಟೋ ಗಿಡಗಳು ನೆಲಕಚ್ಚಿವೆ. ನಷ್ಟದಿಂದಾಗಿ ರೈತರು ಟೊಮೆಟೊ ಕೃಷಿಯನ್ನು ಕಡಿಮೆ ಮಾಡಿದ್ದಾರೆ.