ಕೋಲಾರ: ಟೊಮೆಟೊ ದರ ಏರು ಗತಿಯಲ್ಲಿ ಸಾಗಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆ ಹರಾಜಿನಲ್ಲಿ ಉತ್ತಮ ಗುಣಮಟ್ಟದ 15 ಕೆಜಿ ಬಾಕ್ಸ್ ಟೊಮೆಟೊಗೆ 1000 ರೂ.ಗೂ ಹೆಚ್ಚು ದರ ಸಿಗುತ್ತಿದೆ.
ವಾರದ ಹಿಂದೆ 550 ರೂ.ಗೆ ಇದ್ದ ಒಂದು ಬಾಕ್ಸ್ ಟೊಮೆಟೊ ದರ 1000 ರೂ. ಗಡಿ ದಾಟಿದೆ. ಕಳೆದ ತಿಂಗಳು 15 ಕೆಜಿ ಬಾಕ್ಸ್ ಟೊಮೆಟೊ ದರ ಕೇವಲ 200 ರೂಪಾಯಿ ಇತ್ತು. ಇಳುವರಿ ಕುಸಿತ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿರುವುದರಿಂದ ಮತ್ತು ಹೊರ ರಾಜ್ಯಗಳಿಂದ ಬೇಡಿಕೆ ಇರುವುದರಿಂದ ದರ ಹೆಚ್ಚಳವಾಗಿದೆ.
ಟೊಮೆಟೊ ಫಸಲು ಕಡಿಮೆಯಾಗಿದ್ದು, ಖರೀದಿಗೆ ಹೊರ ರಾಜ್ಯಗಳ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕೋಲಾರ ಮಾರುಕಟ್ಟೆಯಿಂದ ಪ್ರತಿದಿನ 40ಕ್ಕೂ ಅಧಿಕ ಲೋಡ್ ಟೊಮೆಟೊ ಹೊರರಾಜ್ಯಗಳಿಗೆ ಪೂರೈಕೆ ಆಗುತ್ತಿದೆ. ಬಕ್ರಿದ್ ಸಮೀಪ ಇರುವುದರಿಂದ ಟೊಮೆಟೊ ಬೇಡಿಕೆ ಹೆಚ್ಚಾಗಿದೆ. ಇಳುವರಿ ಕಡಿಮೆಯಾಗಿ ಗುಣಮಟ್ಟ ಕುಸಿತವಾಗಿದೆ. ಹೊರ ರಾಜ್ಯಗಳ ವರ್ತಕರ ಬೇಡಿಕೆ ಹೆಚ್ಚಾಗಿರುವುದರಿಂದ ಟೊಮೆಟೊ ದರ ಏರುಗತಿಯಲ್ಲಿ ಸಾಗಿದೆ. ಬೆಳೆ ಬೆಳೆಗಾರರಿಗೆ ಟೊಮೆಟೊ ಬಂಪರ್ ಬೆಲೆ ತಂದಿದ್ದರೆ, ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.