ಶಿವಮೊಗ್ಗ : ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆಗಸ್ಟ್ 11 ರಿಂದ ವಿಮಾನ ಹಾರಾಟ ಆರಂಭವಾಗಲಿದೆ. ಮೊದಲ ವಿಮಾನವು ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಸಂಚರಿಸಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆಗಸ್ಟ್ 11 ರಿಂದ ವಿಮಾನ ಹಾರಾಟ ಆರಂಭವಾಗಲಿದೆ ಎಂದರು. ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದು, ಇದೊಂದು ನಮಗೆ ಐತಿಹಾಸಿಕ ಕ್ಷಣವಾಗಿತ್ತು. ವಿಮಾನ ನಿಲ್ದಾಣ ಯೋಜನೆಯ ರೂವಾರಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದಂದು ಇದನ್ನು ಉದ್ಘಾಟಿಸಲಾಯಿತು” ಎಂದು ರಾಘವೇಂದ್ರ ಹೇಳಿದರು.
ಶಿವಮೊಗ್ಗ ಮತ್ತು ಬೆಂಗಳೂರು ನಡುವಿನ ಪ್ರಯಾಣದ ದರದ ಬಗ್ಗೆ ಕೇಳಿದಾದ ಪ್ರತಿಕ್ರಿಯೆ ನೀಡಿದ ಅವರು ‘ಪ್ರತಿ ವ್ಯಕ್ತಿಗೆ 2,500 ರಿಂದ 3,000 ರೂ. ನಿಗದಿಯಾಗಿದೆ ಎಂದರು. ವಿಮಾನ ನಿಲ್ದಾಣವು ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಪ್ರಸಿದ್ಧ ಜೋಗ ಜಲಪಾತ ಮತ್ತು ಅನೇಕ ಧಾರ್ಮಿಕ ಸ್ಥಳಗಳು ಜಿಲ್ಲೆಯಲ್ಲಿವೆ. ನೆರೆಯ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರಿನ ಅಭಿವೃದ್ಧಿಯಲ್ಲಿ ವಿಮಾನ ನಿಲ್ದಾಣ ದೊಡ್ಡ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು. ಅಲ್ಲದೇ ಸ್ಥಳೀಯ ಕೈಗಾರಿಕೋದ್ಯಮಿಗಳು ಶಿವಮೊಗ್ಗದಿಂದ ವಿಮಾನ ಸೇವೆಗಳನ್ನು ಪ್ರಾರಂಭಿಸುವುದರಿಂದ ಜಿಲ್ಲೆಯ ಕೈಗಾರಿಕಾ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ ಸಿಗಲಿದೆ ಎಂದು ಹೇಳಿದರು.