ಬಳ್ಳಾರಿ : ಕೇಂದ್ರ ಸರ್ಕಾರದ ಪಿ.ಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ರೈತರು ಧನ ಸಹಾಯ ಪಡೆಯಲು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲ್ಲೂಕಿನಲ್ಲಿ 9751 ರೈತರು, ಕಂಪ್ಲಿ ತಾಲ್ಲೂಕಿನ 127 ರೈತರು, ಕುರುಗೋಡು ತಾಲ್ಲೂಕಿನ 519 ರೈತರು, ಸಂಡೂರು ತಾಲ್ಲೂಕಿನ 3883 ರೈತರು, ಸಿರುಗುಪ್ಪ ತಾಲ್ಲೂಕಿನ 9308 ರೈತರು ಜಿಲ್ಲೆಯಲ್ಲಿ ಒಟ್ಟು 23588 ರೈತರು ಇ-ಕೆವೈಸಿ ಮಾಡಿಸಲು ಬಾಕಿ ಇದ್ದು, ರೈತರು ಇ-ಕೆವೈಸಿ ಮಾಡಿಸದಿದ್ದಲ್ಲಿ ಪಿ.ಎಂ.ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ರೈತರಿಗೆ ನೀಡಲಾಗುವ 14ನೇ ಕಂತಿನ ಆರ್ಥಿಕ ಧನ ಸಹಾಯವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇ-ಕೆವೈಸಿ ಮಾಡಿಸಿದ ರೈತ ಫಲಾನುಭವಿಗಳು ತಮ್ಮ ಆಧಾರ ಸಂಖ್ಯೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ https://pmkisan.gov.in ಗೆ ಭೇಟಿ ನೀಡಿ ಇ-ಕೆವೈಸಿ ಆಯ್ಕೆ ಕ್ಲಿಕ್ ಮಾಡಿ ಆಧಾರ್ ಸಂಖ್ಯೆ ನಮೂದಿಸಿ, ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ ಪ್ರಕ್ರಿಯೆ ಇ-ಕೆವೈಸಿ ಪೂರ್ಣಗೊಳಿಸಬಹುದು.
ಆಧಾರ್‍ಸಂಖ್ಯೆಗೆ ಮೊಬೈಲ್ ನಂಬರ್ ಜೋಡಣೆಯಾಗದ ರೈತರು ಅಥವಾ ಒಟಿಪಿ ಸೃಜನೆಯಾಗದ ರೈತರು ಹತ್ತಿರದ ಗ್ರಾಮ ಪಂಚಾಯತಿಯಲ್ಲಿ ಹೊಸದಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮಒನ್ ಸೇವಾ ಕೇಂದ್ರಗಳಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಹಾಗೂ ಮೊಬೈಲ್‍ನಲ್ಲಿರುವ ಪ್ಲೇಸ್ಟೋರ್‍ನಲ್ಲಿ Facial Authentication mobile app ಮೂಲಕ ಇ-ಕೆವೈಸಿ ಮಾಡಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿ ಅಥವಾ ದೂ.08392-276224 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.