ವಿಜಯಪುರ: ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಸಚಿವ ಎಂ.ಬಿ. ಪಾಟೀಲ್ ಕಿಡಿಕಾರಿದ್ದಾರೆ. ನಾವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಾಗ 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಶೇಖರಣೆ ಇದೆ ಎಂದು ಹೇಳಿದ್ದರು. ಈಗ ಅಕ್ಕಿ ಕೊಡಲು ಆಗಲ್ಲ ಎಂದು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮೊದಲು ಅಕ್ಕಿ ಕೊಡುತ್ತೇವೆ ಎಂದು ನಂತರ ಅಕ್ಕಿ ಪೂರೈಸಲು ಆಗಲ್ಲ ಎನ್ನುತ್ತಿದ್ದಾರೆ. ಬಡವರ ಅನ್ನದ ಜೊತೆ ರಾಜಕಾರಣ ಮಾಡುವುದು ಸರಿಯಲ್ಲ. ಪುಕ್ಕಟೆಯಾಗಿ ನಾವು ಅಕ್ಕಿ ಕೇಳುತ್ತಿಲ್ಲ, ಹಣ ಕೊಡುತ್ತೇವೆ ಎಂದರು.
4 ದಿನ ವಿಳಂಬವಾದರೂ ನಾವು ಕೊಟ್ಟ ಭರವಸೆಯಂತೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ತಿಳಿಸಿದರು.