ಬಳ್ಳಾರಿ : ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ 1994ರ ಅನುಷ್ಠಾನವನ್ನು ಸ್ಕ್ಯಾನಿಂಗ್ ಕೈಗೊಳ್ಳುವ ತಜ್ಞವೈದ್ಯರು ಮನಃಪೂರ್ವಕವಾಗಿ ಅನುಷ್ಠಾನ ಮಾಡುವ ಮೂಲಕ ಗಂಡು ಹೆಣ್ಣಿನ ಅನುಪಾತದ ತಾರತಮ್ಯ ಹೋಗಲಾಡಿಸಲು ಪಣತೋಡಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ಹೇಳಿದರು.
ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ತಂತ್ರ ವಿಧಾನಗಳ (ಲಿಂಗಾಯ್ಕೆ ನಿಷೇಧ) ಪಿ.ಸಿ ಮತ್ತು ಪಿ.ಎನ್.ಡಿ.ಟಿ 1994 ಕಾಯ್ದೆಯ ಚಟುವಟಿಕೆಗಳನ್ನು ಚುರುಕುಗೊಳಿಸಲು ಅಂತರಾಜ್ಯದ ಗಡಿ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ತುಮಕೂರು ಮತ್ತು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಜೊತೆ ನಗರದ ಪೋಲಾ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಜಂಟಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗರ್ಭಿಣಿಯ ಸ್ಕ್ಯಾನಿಂಗ್ ಮಾಡಿದ ಸಂದರ್ಭದಲ್ಲಿ ಭ್ರೂಣದ ಆರೋಗ್ಯದ ವಿಷಯ ಭ್ರೂಣದ ಬೆಳವಣಿಗೆ, ನ್ಯೂನ್ಯತೆಗಳ ಮಾಹಿತಿಯನ್ನು ಮಾತ್ರ ನೀಡುವ ಕಾರ್ಯ ಜರುಗಬೇಕು. ಭ್ರೂಣ ಲಿಂಗದ ಕುರಿತು ಮಾಹಿತಿ ನೀಡಿದಲ್ಲಿ ಅದು ಅಪರಾಧವೆಂದು ಪರಿಗಣಿಸಲಾಗುತ್ತದೆ.ಪ್ರಸ್ತುತ ವೈದ್ಯಕೀಯ ಕ್ಷೇತ್ರ ಅಮೂಲಾಗ್ರವಾಗಿ ಬೆಳೆಯುತ್ತಿರುವುದರಿಂದ ಸಮಾಜದಲ್ಲಿ ಹೆಣ್ಣಿನ ಅನುಪಾತವನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಎಲ್ಲರೂ ಹೊರುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ತಿಳಿಸಿದರು.
ಮೊದಲ ಅಪರಾಧಕ್ಕೆ 10 ಸಾವಿರ, ಎರಡನೇ ಬಾರಿ ಅಪರಾಧಕ್ಕೆ 50 ಸಾವಿರ ದಂಡ
ಗಡಿ ಜಿಲ್ಲೆಯಲ್ಲಿ ಬರುವ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರುಗಳಿಗೆ ನೊಂದಣಿಯಾಗಿರುವ ಸ್ಕ್ಯಾನಿಂಗ್ ಸೆಂಟರ್ ಹಾಗೂ ನೊಂದಣಿಯಾಗದೆ ಇರುವ ಕೇಂದ್ರಗಳ ಬಗ್ಗೆ ನಿಗಾವಹಿಸಬೇಕು ಎಂದು ತಿಳಿಸಿದರು.ಈ ಕಾಯ್ದೆಯಲ್ಲಿರುವ ನಿಯಮಗಳನ್ನು ಉಲ್ಲಂಘಿಸುವವರು ಶಿಕ್ಷಾರ್ಹರಾಗಿದ್ದು, ಮೊದಲ ಅಪರಾಧಕ್ಕೆ ಹತ್ತು ಸಾವಿರ ರೂಪಾಯಿ ದಂಡದೊಂದಿಗೆ 3 ವರ್ಷ ಜೈಲು ಶಿಕ್ಷೆ ಮತ್ತೆ ಅದೇ ತಪ್ಪನ್ನು ಮಾಡಿದರೆ ಐವತ್ತು ಸಾವಿರ ರೂಪಾಯಿ ದಂಡದೊಂದಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿರುತ್ತದೆ. ಈ ಲಿಂಗ ನಿರ್ಣಯ ಪ್ರಕ್ರಿಯೆಗಳನ್ನು ನಡೆಸುವ, ಒಳಪಡುವ ಅಥವಾ ಪ್ರೋತ್ಸಾಹಿಸುವವರಿಗೂ ಈ ಕಾಯಿದೆ ಅನ್ವಯಿಸುತ್ತದೆ ಎಂದರು.ಅಕ್ರಮ ಲಿಂಗ ಪರೀಕ್ಷೆ ನಡೆಸಿದ ವೈದ್ಯರ ಹೆಸರನ್ನು ಎರಡು ವರ್ಷಗಳ ಕಾಲ ರಾಜ್ಯ ವೈದ್ಯಕೀಯ ಮಂಡಳಿಯಿಂದ ತೆಗೆದುಹಾಕಲಾಗುತ್ತದೆ. ಮತ್ತೆ ಅದೇ ತಪ್ಪನ್ನು ಮಾಡಿದರೆ ಅವರ ಹೆಸರನ್ನು ಶಾಶ್ವತವಾಗಿ ತೆಗೆದುಹಾಕಲಾಗುತ್ತದೆ ಎಂದು ಎಚ್ಚರಿಸಿದರು.
ಆರೋಗ್ಯ ಕಾರ್ಯಕರ್ತರು ಮತ್ತು ಜನರು ಏನು ಮಾಡಬೇಕು:* ಕಾನೂನು ಪಾಲಿಸದೆ ಭ್ರೂಣ ಪರೀಕ್ಷೆ ನಡೆಸುತ್ತಿರುವ ಸಂಸ್ಥೆಗಳು, ವ್ಯಕ್ತಿಗಳು, ಕೇಂದ್ರಗಳು ಗಮನಕ್ಕೆ ಬಂದರೆ ಕೂಡಲೇ ದೂರು ದಾಖಲಿಸಿ (ಸಂಬಂಧಿಸಿದ ವೈದ್ಯಾಧಿಕಾರಿಗೆ) ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಭೆಯಲ್ಲಿ ಅನಂತಪುರ ಜಿಲ್ಲೆಯ ನೋಡಲ್ ಅಧಿಕಾರಿಗಳು ಗಡಿನಾಡು ಪ್ರದೇಶಗಳಲ್ಲಿ ನಡೆಯುವ ಸ್ಕ್ಯಾನಿಂಗ್ ಸೆಂಟರ್ಗಳ ಬಗ್ಗೆ ಹಾಗೂ ಕಾಯ್ದೆ 1994 ಮತ್ತು 1996 ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.ಸಭೆಯಲ್ಲಿ ಅನಂತಪುರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ವೀರ ಅಬ್ಬಾಯಿ, ತುಮಕೂರು ಜಿಲ್ಲೆಯ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರೇಖಾ.ಕೆ.ಬಿ, ಇತರರು ಉಪಸ್ಥಿತರಿದ್ದರು.