ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಮನೆಯಲ್ಲಿ ಚಿನ್ನಾಭರಣ ಕದ್ದಿದ್ದಾಳೆಂದು ಆರೋಪಿಸಿ 23 ವರ್ಷದ ಮಹಿಳೆಯನ್ನ ಸಂಬಂಧಿಕರು ಚಿತ್ರಹಿಂಸೆ ನೀಡಿ ಕೊಂದಿದ್ದಾರೆ. ಕಳ್ಳತನ ಒಪ್ಪಿಕೊಳ್ಳುವಂತೆ ಮಹಿಳೆ ಮೇಲೆ ಬ್ಲೇಡ್ ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಿದ ದಾಳಿಕೋರರು ಆಕೆಯ ಕಿರುಚಾಟ ಕೇಳಬಾರದೆಂದು ಜೋರಾಗಿ ಮ್ಯೂಸಿಕ್ ಹಾಕಿದ್ದಾರೆ.
ಮಹಿಳೆ ಮೃತಪಟ್ಟ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಎರಡು ದಿನಗಳಿಂದ ಮನೆಯಲ್ಲಿ ಜೋರಾಗಿ ಸಂಗೀತ ಮೊಳಗುತ್ತಿರುವುದನ್ನು ಕೇಳಿದ ನೆರೆಹೊರೆಯವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
23 ವರ್ಷದ ಸಮೀನಾ ಸೋಮವಾರ ಗಾಜಿಯಾಬಾದ್‌ನ ಸಿದ್ಧಾರ್ಥ್ ವಿಹಾರ್‌ನಲ್ಲಿರುವ ತನ್ನ ಸಂಬಂಧಿಕರಾದ ಹೀನಾ ಮತ್ತು ರಮೇಶ್ ಅವರ ಮನೆಗೆ ಅವರ ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಮನೆಯಲ್ಲಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿದ್ದು, ಸಮೀನಾ ಕದ್ದೊಯ್ದಿದ್ದಾರೆ ಎಂದು ದಂಪತಿ ಶಂಕಿಸಿದ್ದಾರೆ.
ಹೀನಾ, ರಮೇಶ್ ಮತ್ತು ಇತರರು ಸಮೀನಾ ಮೇಲೆ ದೊಣ್ಣೆ ಮತ್ತು ರಾಡ್‌ಗಳಿಂದ ಹಲ್ಲೆ ಮಾಡಲು ಪ್ರಾರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ತಪ್ಪೊಪ್ಪಿಕೊಳ್ಳುವಂತೆ ಆಕೆಯ ದೇಹದ ಭಾಗಗಳನ್ನು ಬ್ಲೇಡ್‌ನಿಂದ ಕತ್ತರಿಸಿ ಜೋರಾಗಿ ಸಂಗೀತವನ್ನು ನುಡಿಸಿದ್ದರು. ಆದ್ದರಿಂದ ಆಕೆಯ ಕಿರುಚಾಟ ನೆರೆಹೊರೆಯವರಿಗೆ ಕೇಳಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಚಿತ್ರಹಿಂಸೆಯಿಂದಾಗಿ ಸಮೀನಾ ಸಾವನ್ನಪ್ಪಿದಾಗ ಆರೋಪಿಗಳು ಓಡಿಹೋದರು. ಆದರೆ ಮನೆಯಲ್ಲಿ ಸಂಗೀತ ಹಾಗೆಯೇ ಕೇಳುತ್ತಿತ್ತು. ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ರವಿಕುಮಾರ್ ತಿಳಿಸಿದ್ದಾರೆ.