ಕಲಬುರಗಿ : ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಅಕ್ರಮ ಮರಳು ಸಂಗ್ರಹಣೆ ಮತ್ತು ಮಾರಾಟ, ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ ನೀಡಿದ್ದಾರೆ.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ, ಪೊಲೀಸ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಇನ್ನು ಮುಂದೆ ಅಕ್ರಮ ಮರಳು, ಕಲ್ಲು ಗಣಗಾರಿಕೆ ಕುರಿತು ಯಾವುದೇ ದೂರು ಬಂದಲ್ಲಿ ಪೊಲೀಸ್, ಕಂದಾಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನೆ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಅಕ್ರಮ ಮರಳು ಮಾಫಿಯಾಗಿ ಇತ್ತೀಚೆಗೆ ನೆಲೋಗಿ ಪೊಲೀಸ್ ಠಾಣೆಯ ಮಯೂರ್ ಚವ್ಹಾಣ್ ಸಾವನಪ್ಪಿದ್ದು, ಅವರು ಕುಟಂಬದ ಆಧಾರ ಸ್ಥಂಬವೆ ಇಲ್ಲದಂತಾಗಿದೆ. ಇಂದು ಅವರ ಮನೆಗೆ ನಾನು ಹೋಗಿ ಬಂದಿದ್ದೇನೆ. ಒಮ್ಮೆ ಆ ಮನೆಗೆ ಭೇಟಿ ಕೊಟ್ಟು ಬನ್ನಿ, ಆ ಕುಟುಂಬದ ನೋವು ಏನೆಂದು ತಿಳಿಯುತ್ತೆ. ನಿಮ್ಮ ಇಲಾಖೆಯ ಓರ್ವ ಸಿಬ್ಬಂದಿ ಮಾಫಿಯಾಗೆ ಬಲಿಯಾಗಿದ್ದಾನೆ. ರಾಜಕೀಯ ನಾಯಕರು, ಪೊಲೀಸ್ ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳ ಶ್ರೀರಕ್ಷೆ ಇಲ್ಲದೆ ಇದೆಲ್ಲ ನಡೆಯಲ್ಲ. ಇನ್ನು ಮುಂದೆ ನಡೆಯೋದಿಲ್ಲ. ಇದಕ್ಕೆ ಕಡಿವಾಣ ಹಾಕಲೇಬೇಕು ಎಂದು ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳಿಗೆ ಸಚಿವರು ಎಚ್ಚರಿಕೆ ನೀಡಿದರು.
ವಾಹನಗಳನ್ನು ಸೀಜ್ ಮಾಡಿ
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಅಕ್ರಮ ಮರಳು ಗಣಿಗಾರಿಕೆ, ಕಲ್ಲು ಗಣಿಗಾರಿಕೆಯಲ್ಲಿ ಭಾಗಿಯಾಗುವ ವಾಹನಗಳನ್ನು ಆರ್.ಟಿ.ಓ. ಅಧಿಕಾರಿಗಳು ಸೀಜ್ ಮಾಡಬೇಕು. ರಾಯಲ್ಟಿಕ್ಕಿಂತ ಹೆಚ್ಚಿನ ಟ್ರಿಪ್ ಸಾಗಾಣಿಕೆಯಾಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಅಕ್ರಮ ಅಕ್ಕಿ ಸಾಗಾಣಿಕೆ ಮೇಲೂ ನಿಗಾ ಇಡಬೇಕು. ಓವರ್ ಲೋಡೆಡ್ ವಾಹನಗಳನ್ನು ವಶಕ್ಕೆ ಪಡೆಯಬೇಕು. ಸಿಮೆಂಟ್ ಖಾರ್ಖಾನೆಗಳಿಗಡೀ ಸಂಬಂಧ ಪತ್ರ ಬರೆದು ಎಚ್ಚರಿಕೆ ನೀಡಬೇಕು. ಓವರ್ ಲೋಡೆಡ್ ವಾಹನಗಳ ಸಂಚಾರದಿಂದ ರಸ್ತೆ ಹಾಳಾಗುತ್ತಿದೆ ಎಂದರು.
ಸಭೆಯಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ ಕುಮಾರ್, ಎಸ್.ಪಿ. ಇಶಾ ಪಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವಾರ್ ಸಿಂಗ್ ಮೀನಾ, ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ಇದ್ದರು.