ಬೆಂಗಳೂರು: ಅಕ್ಕಿ ವಿತರಣೆಗೆ ನಿರಾಕರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ವಿರುದ್ಧ ಕೇಂದ್ರ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಆರಂಭದಲ್ಲಿ ಹೆಚ್ಚುವರಿ ಅಕ್ಕಿ ನೀಡಲು ಎಫ್ ಸಿ ಐ ಒಪ್ಪಿಗೆ ನೀಡಿತ್ತು. ಆದರೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ತಡೆದಿದೆ. ಹಾಗಾಗಿ ಎಫ್ ಸಿ ಐ ಅಕ್ಕಿ ನೀಡಲು ಹಿಂದೇಟು ಹಾಕುತ್ತಿದೆ. ಬಡವರಿಗೆ ಅಕ್ಕಿ ಕೊಡುವುದರಲ್ಲಿಯೂ ದ್ವೇಷದ ರಾಜಕಾರಣ ಮಾಡಿರುವ ಕೇಂದ್ರ ಸರ್ಕಾರಕ್ಕೆ ಕಿಂಚಿತ್ತೂ ಮಾನವೀಯತೆ ಎನ್ನುವುದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಅಕ್ಕಿ ಖರೀದಿಗೆ ಹಲವು ರಾಜ್ಯಗಳೊಂದಿಗೆ ಮಾತನಾಡಿದ್ದೇವೆ. ಛತ್ತೀಸ್ ಗಢ ಸರ್ಕಾರದವರು ಅಕ್ಕಿ ಕೊಡುವುದಾಗಿ ಹೇಳಿದ್ದಾರೆ. ಛತ್ತೀಸ್ ಗಢದಿಂದ ಅಕ್ಕಿ ತರಿಸಿದರೆ ಎಫ್ ಸಿ ಐ ಗಿಂತಲೂ ದರ ಹೆಚ್ಚಾಗುತ್ತದೆ. ಹಲವು ರಾಜ್ಯಗಳೊಂದಿಗೆ ಚರ್ಚೆ ನಡೆಯುತ್ತಿರುವುದರಿಂದ ಸ್ವಲ್ಪ ವಿಳಂಬವಾಗುತ್ತಿದೆ. ಆದರೆ ನಾವು ಕೊಟ್ಟ ಮಾತಿನಂತೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದರು.