ಗೋಧಿಯನ್ನು ಪ್ರಪಂಚದಾದ್ಯಂತ ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ. ಗೋಧಿ ಹಿಟ್ಟಿನಿಂದ ಅನೇಕ ರುಚಿಕರವಾದ ಆಹಾರವನ್ನು ತಯಾರಿಸಲಾಗುತ್ತದೆ. ನಮ್ಮಲ್ಲಿ ಹೆಚ್ಚಿನವರು ವೀಟ್ ಬ್ರೆಡ್ ಹಾಗೂ ಚಪಾತಿಯನ್ನು ಇಷ್ಟಪಡುತ್ತಾರೆ. ಗೋಧಿಯಲ್ಲಿರುವ ಹಲವಾರು ರೀತಿಯ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ಆದರೆ ನೀವು ಎಂದಾದರೂ ಮೊಳಕೆಯೊಡೆದ ಗೋಧಿಯನ್ನು ಸೇವಿಸಿದ್ದೀರಾ? ನಮ್ಮಲ್ಲಿ ಹೆಚ್ಚಿನವರು ಇದನ್ನು ಸೇವಿಸಿರುವುದಿಲ್ಲ. ಮೊಳಕೆಯೊಡೆದ ಗೋಧಿ ಸೇವನೆಯಿಂದ ಆರೋಗ್ಯಕ್ಕೆ ದುಪ್ಪಟ್ಟು ಪ್ರಯೋಜನಗಳು ಸಿಗುತ್ತವೆ.
ಮೊಳಕೆ ಬರಿಸಿದ ಗೋಧಿಯ ಪ್ರಯೋಜನಗಳು
ತೂಕ ನಿಯಂತ್ರಣ – ತೂಕ ಹೆಚ್ಚಾಗುವುದು ಹೊಸ ಸಮಸ್ಯೆಯಲ್ಲ, ಶತಮಾನಗಳಿಂದ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಆದರೆ ಕರೋನ ವೈರಸ್ ಸಾಂಕ್ರಾಮಿಕದ ನಂತರ, ಲಾಕ್‌ಡೌನ್ ಮತ್ತು ವರ್ಕ್ ಫ್ರಮ್ ಹೋಮ್‌ನಿಂದಾಗಿ ಜನರ ದೈಹಿಕ ಚಟುವಟಿಕೆಗಳು ಗಣನೀಯವಾಗಿ ಕಡಿಮೆಯಾಗಿವೆ. ಇದರಿಂದಾಗಿ ವೇಗವಾಗಿ ತೂಕ ಹೆಚ್ಚಾಗುತ್ತಿದೆ. ತೂಕ ಇಳಿಸುವ ಪ್ರಯತ್ನದಲ್ಲಿರುವವರು ಮೊಳಕೆ ಬರಿಸಿದ ಗೋಧಿಯನ್ನು ಸೇವಿಸಬಹುದು. ಬೆಳಗಿನ ಉಪಾಹಾರದಲ್ಲಿ ಅದನ್ನು ತಿನ್ನುವುದು ಉತ್ತಮ. ಇದರಿಂದ ಶಕ್ತಿಯು ದಿನವಿಡೀ ಹಾಗೇ ಉಳಿಯುತ್ತದೆ ಮತ್ತು ದೀರ್ಘಕಾಲ ಹಸಿವನ್ನು ಅನುಭವಿಸುವುದಿಲ್ಲ. ಪರಿಣಾಮ ಕ್ರಮೇಣ ತೂಕ ಕಡಿಮೆಯಾಗಲು ಪ್ರಾರಂಭಿಸುತ್ತದೆ.
ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ- ಯಾವಾಗಲೂ ಹೊಟ್ಟೆ ನೋವಿನಿಂದ ಬಳಲುತ್ತಿರುವವರು ತಮ್ಮ ದೈನಂದಿನ ಆಹಾರದಲ್ಲಿ ಮೊಳಕೆಯೊಡೆದ ಗೋಧಿಯನ್ನು ಸೇರಿಸಿಕೊಳ್ಳಬೇಕು. ಏಕೆಂದರೆ ಇದು ಬಹಳಷ್ಟು ಫೈಬರ್ ಅನ್ನು ಹೊಂದಿರುತ್ತದೆ. ಮಲಬದ್ಧತೆ, ಅಸಿಡಿಟಿ. ಗ್ಯಾಸ್ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.
ಮೂಳೆಗಳನ್ನು ಬಲಪಡಿಸುತ್ತದೆ – ವಯಸ್ಸು ಹೆಚ್ಚಾದಂತೆ ಮೂಳೆಗಳು ಮೊದಲಿನಂತೆ ಗಟ್ಟಿಯಾಗಿ ಉಳಿಯದೇ ಕ್ರಮೇಣ ದೇಹದಲ್ಲಿ ದೌರ್ಬಲ್ಯ ಬರಲು ಶುರುವಾಗುತ್ತದೆ. ಇದನ್ನು ತಪ್ಪಿಸಲು ಬೆಳಗ್ಗೆ ಮೊಳಕೆ ಬರಿಸಿದ ಗೋಧಿಯನ್ನು ತಿನ್ನಬೇಕು. ಹೀಗೆ ಮಾಡುವುದರಿಂದ ಮೂಳೆಗಳಿಗೆ ಅಗಾಧವಾದ ಶಕ್ತಿ ಬರುತ್ತದೆ. ಮೊಳಕೆ ಬರಿಸಿದ ಗೋಧಿ ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದು ಮೂಳೆಯ ಆರೋಗ್ಯಕ್ಕೆ ಅಗತ್ಯ.