ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಬಳಿ ಅವರ ವೃತ್ತಿ ಜೀವನದ ಆರಂಭದಿಂದಲೂ ಕಾರ್ಯನಿರ್ವಹಿಸುತ್ತಿದ್ದ ಮ್ಯಾನೇಜರ್, ಬರೋಬ್ಬರಿ 80 ಲಕ್ಷ ರೂಪಾಯಿಗಳಷ್ಟು ವಂಚನೆ ಎಸಗಿದ್ದಾರೆ ಎನ್ನಲಾಗಿದ್ದು, ಈ ವಿಷಯ ಅರಿವಿಗೆ ಬರುತ್ತಿದ್ದಂತೆ ನಟಿ ಆತನನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಸ್ತುತ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ ದಿ ರೂಲರ್’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ, ಅತ್ಯಂತ ನಂಬಿಕಸ್ತನಂತೆ ಕಾರ್ಯನಿರ್ವಹಿಸುತ್ತಿದ್ದ ಮ್ಯಾನೇಜರ್ ಇಂತಹ ಕೆಲಸ ಮಾಡಿರುವುದಕ್ಕೆ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಈ ವಿಷಯವನ್ನು ಮತ್ತಷ್ಟು ಬೆಳೆಸಲು ಬಯಸದ ರಶ್ಮಿಕಾ, ಮ್ಯಾನೇಜರ್ ಗೆ ಗೇಟ್ ಪಾಸ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂದೀಪ್ ರೆಡ್ಡಿ ವಂಗಾ ಅವರ ಮುಂಬರುವ ‘ಅನಿಮಲ್’ ಚಿತ್ರದಲ್ಲೂ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ರಣಬೀರ್ ಕಪೂರ್, ಅನಿಲ್ ಕಪೂರ್, ಬಾಬಿ ಡಿಯೋಲ್ ಮೊದಲಾದ ಕಲಾವಿದರು ನಟಿಸಿದ್ದಾರೆ. ಈ ಚಿತ್ರ ಆಗಸ್ಟ್ 11ರಂದು ತೆರೆ ಕಾಣಲಿದೆ ಎಂದು ತಿಳಿದುಬಂದಿದೆ.