ಬೆಂಗಳೂರು; ಅನ್ನಭಾಗ್ಯ ಯೋಜನೆಗಾಗಿ ಹೆಚ್ಚುವರಿ ಅಕ್ಕಿಯನ್ನು ರಾಜ್ಯದ ರೈತರಿಂದ ಖರೀದಿ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ರೈತರಿದಲೇ ಅಕ್ಕಿ ಖರೀದಿಸಬಹುದಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ರಾಜ್ಯದ ರೈತರಿಂದ ಅಕ್ಕಿ ಖರೀದಿ ಇಲ್ಲ. ಸೋನಾ ಮಸೂರಿ ಅಕ್ಕಿ ಪ್ರತಿ ಕೆಜಿಗೆ 55 ರೂ. ಆಗುತ್ತದೆ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ-ಎಫ್ ಸಿಐ ಪ್ರತಿ ಕೆಜಿಗೆ ಕೊಡೋದೇ 36.60 ರೂ. ಸೋನಾಮಸೂರಿ ಅಕ್ಕಿ ಕೊಡಲು ಆಗುತ್ತಾ? ಎಂದು ಪ್ರಶ್ನಿಸಿದರು.
ಹೆಚ್ಚುವರಿ ಅಕ್ಕಿ ವಿಚಾರವಾಗಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಬಡವರ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುತ್ತಿರುವುದು ಯಾಕೆ? ರಾಜ್ಯ ಬಿಜೆಪಿ ನಾಯಕರಿಗೆ ಬಡವರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಅಕ್ಕಿ ಕೊಡಿಸಲಿ ಎಂದು ಹೇಳಿದರು.