ರಾಮಾಯಣ ಕಥೆ ಆಧರಿತ ’ಆದಿಪುರುಷ್’ ಚಿತ್ರದ ಮೇಕಿಂಗ್ ಕುರಿತು ಆಸ್ತಿಕರು ಮಾತ್ರವಲ್ಲದೇ ಸಿನೆಮಾಸಕ್ತರಿಂದಲೂ ಭಾರೀ ಟೀಕೆಗಳು ಕೇಳಿ ಬರುತ್ತಿವೆ. ಹಿಂದೂ ಧರ್ಮ ಹಾಗೂ ದೇವತೆಗಳನ್ನು ಈ ಚಿತ್ರದಲ್ಲಿ ವ್ಯಂಗ್ಯ ಮಾಡಲಾಗಿದೆ ಎಂದು ಸಂಸತ್ತಿನಲ್ಲಿ ವಿಪಕ್ಷಗಳು ದನಿಯೇರಿಸಿವೆ.
“ಈ ಚಿತ್ರದಲ್ಲಿ ಹಿಂದೂ ಧರ್ಮವನ್ನು ಅವಮಾನ ಮಾಡಲಾಗಿದೆ. ಬಿಜೆಪಿ ನಾಯಕರು ಇದನ್ನು ಪ್ರಚೋದಿಸುತ್ತಿದ್ದಾರೆ. ನೀವು ಈ ಚಿತ್ರದ ಡೈಲಾಗ್‌ಗಳನ್ನು ಕೇಳಿದರೆ ನಾಚಿಕೆ ಪಟ್ಟುಕೊಳ್ಳುತ್ತೀರಿ. ಧರ್ಮದ ವಿಚಾರದಲ್ಲೂ ಬಿಜೆಪಿ ದುರಹಂಕಾರ ತೋರುತ್ತಿದೆ. ಬಿಜೆಪಿ ಮಂದಿ ಪ್ರಭು ಶ್ರೀರಾಮನಿಗೂ ಸೇರಿದವರಲ್ಲ ಅಥವಾ ಸಾಮಾನ್ಯ ಜನರ ಪೈಕಿಯಲ್ಲೂ ಇಲ್ಲ, ಅವರಿಂದ ಯಾವ ಪ್ರಯೋಜನವೂ ಇಲ್ಲ. ನರೇಂದ್ರ ಮೋದಿ ಹಾಗೂ ಜೆಪಿ ನಡ್ಡಾ ಈ ವಿಚಾರವಾಗಿ ಕ್ಷಮೆ ಯಾಚಿಸಬೇಕು,” ಎಂದು ಆಪ್ ಪಕ್ಷದ ಸಂಸದ ಸಂಜಯ್ ಸಿಂಗ್ ಕಿಡಿ ಕಾರಿದ್ದಾರೆ.
ಈ ಚಿತ್ರಕ್ಕೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಹರಿಯಾಣಾದ ಮನೋಹರ್‌ಲಾಲ್ ಖಟ್ಟರ್, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿರ ಬೆಂಬಲವೂ ಇದೆ ಎಂದು ಆಪ್ ಅಣಕವಾಡಿದೆ.
ಸಿಯಾರಾಮರ ಆಲೋಚನೆ ಬರುತ್ತಲೇ ಜನಮಾನಸದಲ್ಲಿ ಅವರ ಗೌರವಯುತವಾದ ಅವತಾರ ಹಾಗೂ ಧ್ವನಿಗಳು ಗೋಚರಿಸುತ್ತಿದ್ದವು. ಆದರೆ ಈ ಚಿತ್ರದಲ್ಲಿ ತೀರಾ ಟಪೋರಿ ಭಾಷೆಯಲ್ಲಿ ಶ್ರೀ ರಾಮಚಂದ್ರರನ್ನು ತೋರಲಾಗಿದೆ ಎಂದು ಆಪಾದಿಸಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಠೆ, “ಧರ್ಮ ಹಾಗೂ ಧರ್ಮದ ಮೇಲಿನ ವ್ಯಾಪಾರಗಳ ನಡುವಿನ ವ್ಯತ್ಯಾಸ ಇದೇ,” ಎಂದಿದ್ದಾರೆ.
ಶಿವಸೇನಾ ಸಹ ಕಾಂಗ್ರೆಸ್ ಹಾಗೂ ಆಪ್‌ಗಳ ಜೊತೆ ದನಿಗೂಡಿಸಿದ್ದು, ಹಿಂದೂ ಧರ್ಮದ ಮಹಾಕಾವ್ಯ ರಾಮಾಯಣಕ್ಕೆ ಆದಿಪುರುಷ್ ಚಿತ್ರ ಅವಮಾನ ಮಾಡಿದೆ ಎಂದು ಆಪಾದಿಸಿದೆ.