ಮುಂಬೈ: ಮದ್ಯಪಾನ ಮಾಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಜೋಡಿ ಕೊಲೆ ಮತ್ತು ದರೋಡೆಯ ವಿವರಗಳನ್ನು ಬಹಿರಂಗಪಡಿಸಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ 30 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ.
ಅಕ್ಟೋಬರ್ 1993 ರಲ್ಲಿ ಅವಿನಾಶ್ ಪವಾರ್ ಎಂಬಾತ ಲೋನಾವಾಲಾದಲ್ಲಿ ಮನೆಯನ್ನು ದರೋಡೆ ಮಾಡುವಾಗ ಇಬ್ಬರನ್ನು ಕೊಂದಿದ್ದ. ಆ ಸಮಯದಲ್ಲಿ ಆತನಿಗೆ 19 ವರ್ಷ ವಯಸ್ಸು. ಕೊನೆಗೆ ತನ್ನ ತಾಯಿಯನ್ನು ಬಿಟ್ಟು ದೆಹಲಿಗೆ ಪರಾರಿಯಾಗಿದ್ದ.
ನಂತರ ಆತ ಮಹಾರಾಷ್ಟ್ರದ ಔರಂಗಾಬಾದ್‌ಗೆ ತೆರಳಿದ್ದ. ಅಲ್ಲಿ ಅಮಿತ್ ಪವಾರ್ ಹೆಸರಿನಲ್ಲಿ ಚಾಲನಾ ಪರವಾನಗಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಔರಂಗಾಬಾದ್‌ನಿಂದ, ಪವಾರ್ ಪಿಂಪ್ರಿ-ಚಿಂಚ್‌ವಾಡ್ ಮತ್ತು ಅಹ್ಮದ್‌ನಗರಕ್ಕೆ ಹೋಗಿ ಅಂತಿಮವಾಗಿ ಮುಂಬೈನ ವಿಕ್ರೋಲಿಯಲ್ಲಿ ನೆಲೆಸಿದ್ದ.
ಪವಾರ್ ತನ್ನ ಹೊಸ ಹೆಸರಿನಲ್ಲಿ ಆಧಾರ್ ಕಾರ್ಡ್ ಪಡೆದುಕೊಂಡು ಮದುವೆಯನ್ನೂ ಆಗಿ ರಾಜಕೀಯ ಪ್ರವೇಶಿಸಿ ಆರಾಮಾಗಿ ಇದ್ದ. ಈಗ 49 ವರ್ಷ ವಯಸ್ಸಿನವನಾಗಿರುವ ಈತ ತಾನು ಎಂದಿಗೂ ಸಿಕ್ಕಿಬೀಳುವುದಿಲ್ಲ ಎಂಬ ವಿಶ್ವಾಸದಿಂದ, ಕೆಲವು ದಿನಗಳ ಹಿಂದೆ ಮದ್ಯಪಾನದ ಗುಂಗಿನಲ್ಲಿ ಡಬಲ್ ಮರ್ಡರ್ ಕೇಸ್ ಬಗ್ಗೆ ಯಾರದೋ ಒಬ್ಬರ ಬಳಿ ಬಾಯಿ ಬಿಟ್ಟಿದ್ದಾನೆ. ಮುಂಬೈ ಕ್ರೈಂ ಬ್ರಾಂಚ್‌ನ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರಿಗೆ ವ್ಯಕ್ತಿಯಿಂದ ಸುಳಿವು ಸಿಕ್ಕಿದ್ದು, ಪವಾರ್ನನ್ನು ಬಂಧಿಸಿದ್ದಾರೆ.