ಬೆಂಗಳೂರು: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಹೊರ ರಾಜ್ಯಗಳಿಂದ ಅಕ್ಕಿ ಖರೀದಿಗೆ ಮುಂದಾಗಿರುವುದರ ಹಿಂದೆ ಕಮಿಷನ್ ಪಡೆಯುವ ಹುನ್ನಾರವಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ನಮ್ಮ ರಾಜ್ಯದ ರೈತರಿಂದಲೇ ಅಕ್ಕಿ ಖರೀದಿಸಿದರೆ ರೈತರಿಗೂ ಅನುಕೂಲವಾಗುತ್ತದೆ. ಅದನ್ನು ಬಿಟ್ಟು ಕಮಿಷನ್ ಹೊಡೆಯುವ ಉದ್ದೇಶದಿಂದ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಅನೇಕ ರಾಜ್ಯಗಳಿಗೆ ನಮ್ಮ ರಾಜ್ಯದಿಂದಲೇ ಅಕ್ಕಿ ಸಾಗಾಣೆ ಆಗುತ್ತಿರುವಾಗ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸುವ ಉದ್ದೇಶವೇನು? ರಾಜ್ಯದ ರೈತರ ಅಲ್ಲಿ ಗುಣಮಟ್ಟದ ಅಕ್ಕಿ ಲಭ್ಯವಿದ್ದು, ಇಲ್ಲಿಯೇ ಖರೀದಿಸಬಹುದು. ಆದರೆ, ಹೊರ ರಾಜ್ಯಗಳಿಂದ ಅಕ್ಕಿ ಖರೀದಿಸಲು ಮುಂದಾಗಿರುವುದರ ಹಿಂದೆ ಕಮಿಷನ್ ಪಡೆಯುವ ಹುನ್ನಾರವಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ 5 ಕೆ.ಜಿ ಅಕ್ಕಿ ಕೊಡುತ್ತಿದ್ದು, ಹೆಚ್ಚುವರಿ 5 ಕೆಜಿಯನ್ನು ಎಲ್ಲಾದರೂ ಖರೀದಿಸಬಹುದು. ಅದನ್ನು ಬಿಟ್ಟು ಪ್ರಧಾನಿಯವರ ಮೇಲೆ ಆರೋಪ ಹೊರಿಸಲಾಗುತ್ತಿದೆ. ಮುಖ್ಯಮಂತ್ರಿಗಳಿಗೆ ವಾಸ್ತವ ಸ್ಥಿತಿ ಅರಿವಾಗಿದ್ದು, ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗದೆ ಕಾಂಗ್ರೆಸ್ ಒದ್ದಾಡುತ್ತಿದೆ ಎಂದು ಟೀಕಿಸಿದ್ದಾರೆ.