ಶಿವಮೊಗ್ಗ: ಕೇಶವ ಹೆಡ್ಗೇವಾರ್, ಸಾವರ್ಕರ್ ಪಾಠ ಸರ್ಕಾರ ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪಠ್ಯವನ್ನು ತೆಗೆಯಲು ಸರ್ಕಾರ ಮುಂದಾದರೆ ಅದಕ್ಕೆ ಅಭ್ಯಂತರವಿಲ್ಲ ಎಂದು ಚಿಂತಕ ರೋಹಿತ್ ಚಕ್ರತೀರ್ಥ ಹೇಳಿದ್ದಾರೆ.
ಶಿವಮೊಗ್ಗ ನಗರದಲ್ಲಿ ಮಾತನಾಡಿದ ಅವರು, ಸಮಿತಿಯಿಂದ ಸರ್ಕಾರಕ್ಕೆ ಶಿಫಾರಸು ಆದ ಬಳಿಕ ಅದು ಸರ್ಕಾರದ ಸ್ವತ್ತು ಆಗಿರುತ್ತದೆ. ಅದು ತೆಗೆಯಿರಿ, ಇದು ತೆಗೆಯಿರಿ, ಏಕೆ ತೆಗೆದಿರಿ ಎಂದು ಪ್ರಶ್ನಿಸಲಾಗುವುದಿಲ್ಲ. ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಸರ್ಕಾರ ಸರ್ವ ಸ್ವತಂತ್ರವಾಗಿದೆ ಎಂದು ಹೇಳಿದ್ದಾರೆ.
ಶಾಲಾ ಪಠ್ಯ ಪರಿಷ್ಕರಣೆ ವೇಳೆ ಹಿಂದಿನ ಅಧ್ಯಕ್ಷರಿಗೆ ಆಹ್ವಾನ ನೀಡಿದ್ದೆವು. ಆದರೆ ಆಗ ಅವರು ಪ್ರತಿಕ್ರಿಯೆ ನೀಡಿರಲಿಲ್ಲ. ಈಗಿನ ಸಮಿತಿಯು ಚರ್ಚೆಗೆ ಆಹ್ವಾನ ನೀಡಿದರೆ ಚರ್ಚೆಗೆ ಸಿದ್ದನಿದ್ದೇನೆ. ದಿಗ್ಗಜರ ಪಠ್ಯ ಏಕೆ ಸೇರಿಸಿದ್ದೇವೆ ಎಂದು ಸ್ಪಷ್ಟ ಕಾರಣ ನೀಡಲು ಸಿದ್ಧವಾಗಿದ್ದೇನೆ. ಪ್ರಜಾಪ್ರಭುತ್ವದ ರೀತಿಯಲ್ಲಿ ಆಹ್ವಾನಿಸಿದರೆ ನಾನು ಮೌನಿಯಾಗಿರುವುದಿಲ್ಲ. ಪ್ರಜಾಪ್ರಭುತ್ವ ರೀತಿಯಲ್ಲಿ ಚರ್ಚೆ ನಡೆದರೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.
ಪಠ್ಯಪರಿಷ್ಕರಣೆಯನ್ನು ಜನಸಾಮಾನ್ಯರು ಒಪ್ಪಿಕೊಂಡರೆ ಒಳ್ಳೆಯದು. ಹೆಡ್ಗೇವಾರ್, ಸಾವರ್ಕರ್ ಪಾಠ ತೆಗೆಯಲು ಸರ್ಕಾರ ತೀರ್ಮಾನಿಸಿದೆ. ಏಕೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಕೇಳಬೇಕು. ಹೆಡ್ಗೇವಾರ್, ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರು ಅಲ್ಲವೆಂದು ಹೇಳಲು ಯಾರಿಗೂ ಸಾಧ್ಯವಿಲ್ಲ. ಈ ಬಗ್ಗೆ ದಾಖಲೆ ಒದಗಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.