ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳು ಹಾಗೂ ವಿಡಿಯೋಗಳ ಅಪ್ಲೋಡ್ ಮಾಡುವುದು ಇಂದಿನ ದಿನಗಳಲ್ಲಿ ಭಾರೀ ದುಡ್ಡು ಮಾಡುವ ಹಾದಿಯಾಗಿದೆ. ಭಾರತದಲ್ಲಿ ಬಹುತೇಕರಿಗೆ ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ನಲ್ಲಿ ವಿಡಿಯೋ ಫೀಡ್ಗಳನ್ನು ಸ್ಕ್ರೋಲಿಂಗ್ ಮಾಡುವುದು ದಿನನಿತ್ಯದ ಅಭ್ಯಾಸವಾಗಿಬಿಟ್ಟಿದೆ.
ಮನರಂಜನೆಯಿಂದ ಹಿಡಿದು ಜ್ಞಾನವರ್ಧನೆ ಮಾಡಬಲ್ಲ ಕಂಟೆಂಟ್ಗಳವರೆಗೂ ಕಂಟೆಂಟ್ ಸೃಷ್ಟಿಕರ್ತರು ಈ ದಿನಗಳಲ್ಲಿ ನೋಡುಗರಿಗೆ ಎಲ್ಲವನ್ನೂ ಒದಗಿಸುತ್ತಿದ್ದಾರೆ.
ದಿನೇ ದಿನೇ ಈ ಟ್ರೆಂಡ್ ಜೋರಾಗಿ ಸಾಗುತ್ತಿರುವ ನಡುವೆ ಯೂಟ್ಯೂಬ್ ತನ್ನ ವಿಡಿಯೋ ಸೃಷ್ಟಿಕರ್ತರಿಗೆ ಹಣ ಸಂಪಾದನೆ ಮಾಡಲು ಇನ್ನಷ್ಟು ಸರಳ ಮಾರ್ಗವೊಂದನ್ನು ಸೃಷ್ಟಿಸಿದೆ.
’ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂ’ ಮೂಲಕ ಕಂಟೆಂಟ್ ಸೃಷ್ಟಿಕರ್ತರು ಇನ್ನು ಮುಂದೆ ತಮ್ಮ ಅಭಿಮಾನಿಗಳಿಂದ ಆನ್ಲೈನ್ ಮೂಲಕ ಹಣ ಪಡೆಯಬಹುದಾಗಿದ್ದು, ಇದರೊಂದಿಗೆ ಜಾಹೀರಾತುಗಳ ಮೂಲಕ ಬರುವ ಆದಾಯದಲ್ಲಿ ಪಾಲನ್ನೂ ಪಡೆಯಬಹುದಾಗಿದೆ.
ತಮ್ಮ ಕಂಟೆಂಟ್ ಅನ್ನು ’ಮಾನಿಟೈಸ್ ಮಾಡಲು’ ಇದ್ದ ಕನಿಷ್ಠ ಚಂದಾದಾರರ ಸಂಖ್ಯಾಬಲದ ಅರ್ಹತೆಯನ್ನು 1000ದಿಂದ 500ಕ್ಕೆ ಇಳಿಸಿರುವ ಯೂಟ್ಯೂಬ್, ಕನಿಷ್ಠ ವೀಕ್ಷಣಾ ಗಂಟೆಗಳನ್ನು 4,000ದಿಂದ 3,000ಕ್ಕೆ ಇಳಿಸಿದೆ.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸೃಷ್ಟಿಕರ್ತರಿಗೆ ಮೂರು ತಿಂಗಳ ಒಳಗೆ 10 ದಶಲಕ್ಷ ವೀಕ್ಷಣೆಗಳ ಮಾನದಂಡವನ್ನು ಈಗ ಮೂರು ದಶಲಕ್ಷಕ್ಕೆ ಇಳಿಸಲಾಗಿದೆ. ಎಡ ಮೆನು ಕ್ಲಿಕ್ ಮಾಡಿ, ’ಅರ್ನ್’ ಆಯ್ಕೆಯನ್ನು ಕ್ಲಿಕ್ ಮಾಡಿ, ’ಆಡ್ಸೆನ್ಸ್’ ಖಾತೆಯನ್ನು ಸೆಟಪ್ ಮಾಡುವ ಮೂಲಕ ಯೂಟ್ಯೂಬ್ ಕಂಟೆಂಟ್ ಮೂಲಕ ಹಣ ಸಂಪಾದಿಸುವ ಹಾದಿ ಹಿಡಿಯಬಹುದಾಗಿದೆ.
ಈ ಮೇಲ್ದರ್ಜೆಯು ಅದಾಗಲೇ ಅಮೆರಿಕ, ಕೆನಡಾ, ಥೈಯ್ವಾನ್, ದಕ್ಷಿಣ ಕೊರಿಯಾ ಹಾಗೂ ಬ್ರಿಟನ್ನಲ್ಲಿ ಜಾರಿಗೆ ಬಂದಿದೆ. ಭಾರತದಲ್ಲಿ ಈ ಸರಳೀಕೃತ ಮಾನದಂಡಗಳು ಅನುಷ್ಠಾನಕ್ಕೆ ಬರಲು ಇನ್ನಷ್ಟು ದಿನಗಳು ಕಾಯಬೇಕಿದೆ.