ನವದೆಹಲಿ: ಮಹಿಳಾ ಸ್ನೇಹಿತೆಯನ್ನು ಕಾಕ್ ಪಿಟ್ ಗೆ ಆಹ್ವಾನಿಸಿದ್ದಕ್ಕಾಗಿ ಇಬ್ಬರು ಏರ್ ಇಂಡಿಯಾ ಪೈಲಟ್ ಗಳನ್ನು ಅಮಾನತುಗೊಳಿಸಲಾಗಿದೆ. ಕಾಕ್ ಪಿಟ್ ನಿಯಮಗಳ ಉಲ್ಲಂಘನೆಗಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಏರ್ ಇಂಡಿಯಾಕ್ಕೆ 30 ಲಕ್ಷ ರೂಪಾಯಿ ದಂಡ ವಿಧಿಸಿದ ಸುಮಾರು ಒಂದು ತಿಂಗಳ ನಂತರ ಇದು ನಡೆದಿದೆ.
ಕಳೆದ ವಾರ ದೆಹಲಿ-ಲೇಹ್ ವಿಮಾನ AI-445 ನ ಕಾಕ್ ಪಿಟ್ ಗೆ ಅನಧಿಕೃತ ಮಹಿಳೆಯನ್ನು ಅನುಮತಿಸಿದ ಇಬ್ಬರು ಅಧಿಕಾರಿಗಳ ವಿರುದ್ಧ ಏರ್ ಇಂಡಿಯಾ ಕ್ರಮ ಕೈಗೊಂಡಿದೆ. ಕಾಕ್ ಪಿಟ್ ಉಲ್ಲಂಘನೆ ಕುರಿತು ಕ್ಯಾಬಿನ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಏರ್ ಇಂಡಿಯಾ ಆಡಳಿತ ಮಂಡಳಿ ಈ ಕ್ರಮ ಕೈಗೊಂಡಿದೆ.
AI-445 ಪೈಲಟ್ ನ ಮಹಿಳಾ ಸ್ನೇಹಿತರೊಬ್ಬರು ನಿಯಮಗಳನ್ನು ಅನುಸರಿಸದೆ ಕಾಕ್ ಪಿಟ್ ಗೆ ಪ್ರವೇಶಿಸಿದ್ದರು. ಇಬ್ಬರೂ ಪೈಲಟ್ ಗಳನ್ನು ಏರ್ ಇಂಡಿಯಾ ಸಸ್ಪೆಂಡ್ ಮಾಡಿದೆ ಎಂದು ಏರ್ ಇಂಡಿಯಾದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ), ಡಿಜಿಸಿಎಗೆ ಈ ವಿಚಾರ ತಿಳಿದಿದ್ದು, ಕಾರ್ಯವಿಧಾನದ ಅನುಸಾರ ಈ ವಿಷಯದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.