ದಾವಣಗೆರೆ: ರಾಜ್ಯದ ಮಹಿಳೆಯರಿಗೆ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ಜಾರಿಗೆ ತರಲಾಗಿದ್ದು, ಇದಕ್ಕೆ ವಿಧಿಸಿರುವ ಷರತ್ತಿಗೆ ಆಡಳಿತ ಪಕ್ಷ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡುವ ವೇಳೆ ಅವರು ಮಾತನಾಡಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಶಕ್ತಿ ಯೋಜನೆ ಜಾರಿಗೆ ತಂದಿದ್ದು, ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಷರತ್ತು ಏಕೆ ವಿಧಿಸಿದ್ದಾರೆ ಎಂಬುದೇ ಅರ್ಥವಾಗಿಲ್ಲ ಎಂದು ಹೇಳಿದ್ದಾರೆ.
ಉಚಿತವಾಗಿ ಪ್ರಯಾಣ ಮಾಡಲು ಆ ಚೀಟಿ ಕೊಡಿ, ಈ ಚೀಟಿ ಕೊಡಿ ಎಂದು ಕೇಳುವುದು ಸರಿಯಲ್ಲ. ಹೆಣ್ಣು ಮಕ್ಕಳೆಂದರೆ ಹೆಣ್ಣು ಮಕ್ಕಳೇ, ಗಂಡುಮಕ್ಕಳೇಂದರೆ ಗಂಡು ಮಕ್ಕಳೇ. ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಯಾವುದೇ ದಾಖಲೆ ಕೇಳದೇ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಬೇಕಿದೆ. ಶಕ್ತಿ ಯೋಜನೆಗೆ ವಿಧಿಸಿರುವ ಷರತ್ತುಗಳ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದು ತಿಳಿಸಿದ್ದಾರೆ.