ಬೆಂಗಳೂರು: ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಬಯಸಿ ಸಿಇಟಿ ಬರೆದ ವಿದ್ಯಾರ್ಥಿಗಳು ಮೀಸಲು ಸೌಲಭ್ಯ ಪಡೆಯಲು ಸಲ್ಲಿಸಿದ 25,000 ಪ್ರಮಾಣ ಪತ್ರಗಳು ತಾಳೆಯಾಗದ ಕಾರಣ ಮತ್ತೊಮ್ಮೆ ಅಪ್ಲೋಡ್ ಮಾಡಲು ಕರ್ನಾಟಕ ಪ್ರರೀಕ್ಷಾ ಪ್ರಾಧಿಕಾರ ಅವಕಾಶ ಕಲ್ಪಿಸಿದೆ.
ಜೂನ್ 12ರ ವರೆಗೆ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ನಿಗದಿತ ಅವಧಿಯಲ್ಲಿ ಪ್ರಮಾಣ ಪತ್ರ ಸಲ್ಲಿಸದ ಅಭ್ಯರ್ಥಿಗಳ ಮೀಸಲು ರದ್ದು ಮಾಡಿ ಸಾಮಾನ್ಯ ವರ್ಗ ಎಂದು ಪರಿಗಣಿಸಲಾಗುತ್ತದೆ.
ಸಿಇಟಿ ಬರೆದ 2.6 ಲಕ್ಷ ಅಭ್ಯರ್ಥಿಗಳ ಪೈಕಿ 80,000ಕ್ಕೂ ಹೆಚ್ಚು ಅಭ್ಯರ್ಥಿಗಳು ಆರ್ಡಿ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದಾರೆ. ಇದನ್ನು ತಿದ್ದುಪಡಿ ಮಾಡಿಕೊಳ್ಳಲು ವಾರದ ಹಿಂದೆಯೇ ಅವಕಾಶ ನೀಡಲಾಗಿತ್ತು. ಹೀಗಿದ್ದರೂ 24,686 ಅರ್ಜಿಗಳಲ್ಲಿನ ದೋಷಗಳು ಹಾಗೆಯೇ ಉಳಿದುಕೊಂಡಿವೆ. ಆದಾಯ ಪ್ರಮಾಣ ಪತ್ರದ ಬದಲಿಗೆ ಕೆಲವರು ಇ.ಡಬ್ಲ್ಯೂ.ಎಸ್. ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಸಿಇಟಿ ನಿಯಮಗಳ ಪ್ರಕಾರ ಇದಕ್ಕೆ ಮನ್ನಣೆ ಇರುವುದಿಲ್ಲ. ಹೀಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ಪೋರ್ಟಲ್ ನಲ್ಲಿ ಜೂನ್ 12ರ ಬೆಳಗ್ಗೆ 11 ಗಂಟೆಯೊಳಗೆ ತಿದ್ದುಪಡಿ ಮಾಡಿಕೊಳ್ಳಲು ಎಚ್ಚರಿಕೆ ನೀಡಲಾಗಿದೆ.
ಮೀಸಲಾತಿ ಪ್ರಮಾಣ ಪತ್ರಗಳು ಜೋಡಣೆ ಆಗದಿರುವ ಮತ್ತು ತಪ್ಪಾಗಿರುವುದನ್ನು https://cetonline.karnataka.gov.in/ ವೆಬ್ಸೈಟ್ ಮೂಲಕ ಲಿಂಕ್ ಮಾಡಿ ಅಪ್ಲೋಡ್ ಮಾಡಿಕೊಳ್ಳಬಹುದು. ಕಲ್ಯಾಣ ಕರ್ನಾಟಕ ಭಾಗದ 5802 ಮೀಸಲಾತಿ ಪ್ರಮಾಣ ಪತ್ರ, 242 ಎನ್,ಸಿ,ಎಲ್,ಸಿ, ಪ್ರಮಾಣ ಪತ್ರ, 10,645 ಆದಾಯ ಪ್ರಮಾಣ ಪತ್ರ, 7997 ಪ್ರವರ್ಗ ಪ್ರಮಾಣ ಪತ್ರಗಳು ತಾಳೆಯಾಗಿಲ್ಲ ಎಂದು ಹೇಳಲಾಗಿದೆ.