500 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಅಥವಾ 1000 ರೂಪಾಯಿ ನೋಟುಗಳನ್ನು ಮರು ಪರಿಚಯಿಸುವ ವದಂತಿ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಸ್ಪಷ್ಟಪಡಿಸಿದ್ದಾರೆ.
“ಆರ್‌ಬಿಐ ರೂ. 500 ನೋಟುಗಳನ್ನು ಹಿಂತೆಗೆದುಕೊಳ್ಳುವ ಅಥವಾ 1,000 ರೂ. ಮುಖಬೆಲೆಯ ನೋಟುಗಳನ್ನು ಮರು ಪರಿಚಯಿಸುವ ಬಗ್ಗೆ ಯೋಚಿಸುತ್ತಿಲ್ಲ. ವದಂತಿಗಳನ್ನು ಹರಡದಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ “ಎಂದು ಆರ್ಥಿಕ ವರ್ಷ 2023-24ರ ಎರಡನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಅನಾವರಣಗೊಳಿಸಿದ ನಂತರ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಆರ್‌ಬಿಐ ಗವರ್ನರ್ ಸ್ಪಷ್ಟನೆ ನೀಡಿದ್ದಾರೆ. ಚಲಾವಣೆಯಲ್ಲಿದ್ದ 2000ರೂ. ನೋಟುಗಳಲ್ಲಿ ಶೇ.50ರಷ್ಟು ನೋಟುಗಳು ವಾಪಸ್ ಬಂದಿವೆ ಎಂದು ಹೇಳಿದ್ದಾರೆ. ವಾಪಸ್ ಬಂದಿರುವ ನೋಟುಗಳ ಮೌಲ್ಯ 1.82 ಲಕ್ಷ ಕೋಟಿ ರೂ.
ಒಟ್ಟು 3.62 ಲಕ್ಷ ಕೋಟಿ 2000ರೂ. ನೋಟುಗಳು ಚಲಾವಣೆಯಲ್ಲಿದ್ದವು. ಘೋಷಣೆಯ ನಂತರ ಸುಮಾರು 1.8 ಲಕ್ಷ ಕೋಟಿ ರೂಪಾಯಿ ಮೌಲ್ಯದ 2000 ರೂ. ನೋಟುಗಳು ವಾಪಸ್ ಬಂದಿವೆ. ಇದು ಚಲಾವಣೆಯಲ್ಲಿದ್ದ 2,000 ರೂಪಾಯಿ ನೋಟುಗಳ ಸರಿಸುಮಾರು ಶೇಕಡ 50 ರಷ್ಟಿದೆ ಎಂದು ಅವರು ವಿವರಿಸಿದರು.
ವಾಪಸಾದ 2,000 ರೂಪಾಯಿ ನೋಟುಗಳಲ್ಲಿ ಶೇಕಡಾ 85 ರಷ್ಟು ನೋಟುಗಳು ಬ್ಯಾಂಕ್ ಠೇವಣಿಗಳಾಗಿ ಹಿಂತಿರುಗಿದ್ದರೆ ಉಳಿದವು ವಿನಿಮಯದ ರೂಪದಲ್ಲಿ ಬಂದಿವೆ.
ಆರ್‌ಬಿಐ ಮೇ 19 ರಂದು 2,000 ರೂ. ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು.