ಬೆಂಗಳೂರು: ಸಚಿವ ಸ್ಥಾನ ವಂಚಿತ ಕಾಂಗ್ರೆಸ್ ಶಾಸಕರು, ಪಕ್ಷದ ಮುಖಂಡರಿಗೆ ನಿಗಮ ಮಂಡಳಿ ಅಧ್ಯಕ್ಷ, ನಿರ್ದೇಶಕರ ಸ್ಥಾನ ಕಲ್ಪಿಸಲು ಕಾಂಗ್ರೆಸ್ ಮುಂದಾಗಿದೆ.
ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಹಲವು ಶಾಸಕರಿಗೆ ಸಚಿವ ಸ್ಥಾನ ಕೈತಪ್ಪಿದೆ. ಅಂತಹ ಶಾಸಕರಿಗೆ ಪ್ರಮುಖ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗುವುದು. ಪಕ್ಷದ ಮುಖಂಡರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ಕಲ್ಪಿಸಲು ಸರ್ಕಾರ ನಿರ್ಧರಿಸಿದ್ದು, ಜುಲೈ ಮೊದಲ ವಾರ ಬಜೆಟ್ ಮಂಡನೆ ನಂತರ ಅಧಿಕಾರ ಹಂಚಿಕೆ ಮಾಡಲಾಗುವುದು.
ಆರ್ಥಿಕವಾಗಿ ಸದೃಢವಾಗಿರುವ ಮತ್ತು ಲಾಭದಲ್ಲಿರುವ ಸುಮಾರು 40 ನಿಗಮ ಮಂಡಳಿ ಪ್ರಾಧಿಕಾರಗಳ ಪಟ್ಟಿ ಮಾಡಲಾಗುತ್ತಿದ್ದು, ಪಕ್ಷದ ಶಾಸಕರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೊದಲ ಸುತ್ತಿನಲ್ಲಿ ನಾಮ ನಿರ್ದೇಶನ ಮಾಡಲಾಗುತ್ತದೆ. ವಿಧಾನಪರಿಷತ್ ಸದಸ್ಯರಿಗೆ ಸಂಪುಟದಲ್ಲಿ ಪ್ರಾತಿನಿತ್ಯ ಸಿಗದ ಹಿನ್ನೆಲೆಯಲ್ಲಿ ಹಲವು ಎಂಎಲ್‌ಸಿ ಗಳಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲಾಗುವುದು.
ಕರ್ನಾಟಕ ಗೃಹ ಮಂಡಳಿ, ಜಲ ಮಂಡಳಿ, ಕಾಡಾ, ಕೆಎಂಎಫ್ ಮೊದಲಾದ ಪ್ರಮುಖ ನಿಗಮ ಮಂಡಳಿಗಳಿಗೆ ಶಾಸಕರಿಗೆ ಆದ್ಯತೆ ನೀಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮಾಲೋಚನೆ ನಡೆಸಿ ನಿಗಮ ಮಂಡಳಿ ನಾಮನಿರ್ದೇಶನದ ಪಟ್ಟಿ ಅಂತಿಮಗೊಳಿಸಲಿದ್ದಾರೆ. ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಮೊದಲ ಸುತ್ತಿನಲ್ಲಿ ಆದ್ಯತೆ ನೀಡಲಿದ್ದು, ನಂತರ ಪಕ್ಷದ ಮುಖಂಡರನ್ನು ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.