ವಿಲ್ಲುಪುರಂ: ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮೇಲ್ಪತಿ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದವರು ದೇವಾಲಯ ಪ್ರವೇಶಿಸುವ ವಿಚಾರ ವಿವಾದಕ್ಕೆ ಕಾರಣವಾಗಿ ದೇವಾಲಯವನ್ನೇ ಬಂದ್ ಮಾಡಲಾಗಿದೆ.
ಶ್ರೀ ಧರ್ಮರಾಜ ದ್ರೌಪದಿ ಅಮ್ಮನ್ ದೇವಸ್ಥಾನಕ್ಕೆ ಪರಿಶಿಷ್ಟ ಜಾತಿಯ ಸದಸ್ಯರ ಪ್ರವೇಶ ವಿವಾದದ ಹಿನ್ನೆಲೆಯಲ್ಲಿ ತಮಿಳುನಾಡಿನ ಕಂದಾಯ ಅಧಿಕಾರಿಗಳು ಇಂದು ಸೀಲ್ ಮಾಡಿದ್ದಾರೆ.
ವಿಲ್ಲುಪುರಂ ಕಂದಾಯ ವಿಭಾಗಾಧಿಕಾರಿ(ಆರ್‌ಡಿಒ) ಎಸ್. ರವಿಚಂದ್ರನ್ ಅವರು ಇತ್ತೀಚೆಗೆ ಪ್ರಬಲ ಜಾತಿ ಮತ್ತು ಪರಿಶಿಷ್ಟ ಜಾತಿಯ ಪ್ರತಿನಿಧಿಗಳ ನಡುವಿನ ಶಾಂತಿ ಮಾತುಕತೆ ವಿಫಲವಾದ ನಂತರ ದೇವಾಲಯವನ್ನು ಸೀಲ್ ಮಾಡಲು ಆದೇಶಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಯ ಸದಸ್ಯರು ದರ್ಶನಕ್ಕಾಗಿ ದೇವಸ್ಥಾನಕ್ಕೆ ಪ್ರವೇಶ ಮಾಡುವುದನ್ನು ವಿರೋಧಿಸಿ ಪ್ರಬಲ ವರ್ಗದವರು ಪ್ರತಿಭಟನೆ ನಡೆಸುತ್ತಿದ್ದರೆ, ಪರಿಶಿಷ್ಟ ಸಮುದಾಯದವರು ತಮಗೆ ದೇಗುಲ ಪ್ರವೇಶದ ಹಕ್ಕ ನೀಡುವಂತೆ ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ಸೌಹಾರ್ದತೆ ಹದಗೆಡಬಾರದು ಎಂಬ ಕಾರಣಕ್ಕೆ ಜಿಲ್ಲಾಡಳಿತ ಎರಡು ವಿಭಾಗಗಳ ನಡುವೆ ಶಾಂತಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಮುಂದಾಗಿದೆ. ಆದಾಗ್ಯೂ, ಪ್ರಬಲ ಸಮುದಾಯವು ತಮ್ಮ ನಿಲುವಿನಿಂದ ಮಣಿಯಲು ನಿರಾಕರಿಸಿದ್ದರಿಂದ ಸಂಧಾನ ವಿಫಲವಾಯಿತು.
ತೊಂದರೆಯನ್ನು ನಿರೀಕ್ಷಿಸಿದ ಆರ್‌ಡಿಒ, ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಸಂಭವನೀಯ ಭಂಗವಾಗುವುದನ್ನು ತಡೆಗಟ್ಟಲು ದೇವಸ್ಥಾನವನ್ನು ಸೀಲ್ ಮಾಡಲು ಆದೇಶಿಸಿದರು. ಯಾವುದೇ ಹಿಂಸಾತ್ಮಕ ಘಟನೆಗಳು ನಡೆಯದಂತೆ ದೇವಸ್ಥಾನದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.