ಉತ್ತರಪ್ರದೇಶದ ಗ್ರೇಟರ್ ನೋಯ್ಡಾದ ಗೌತಮ್ ಬುದ್ಧ ವಿಶ್ವವಿದ್ಯಾನಿಲಯದ ಹಾಸ್ಟೆಲ್ ಆವರಣದಲ್ಲಿ ವಿದ್ಯಾರ್ಥಿಗಳು ಸಿಗರೇಟ್ ಸೇದುವುದನ್ನು ಭದ್ರತಾ ಸಿಬ್ಬಂದಿ ವಿರೋಧಿಸಿದ ನಂತರ ಭಾರೀ ಘರ್ಷಣೆ ಉಂಟಾಗಿದೆ. ಘರ್ಷಣೆ ಸಂಭವಿಸಿದ ನಂತರ ಖಾಸಗಿ ಭದ್ರತಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಮುನ್ಶಿ ಪ್ರೇಮಚಂದ್ ಹಾಸ್ಟೆಲ್ನಲ್ಲಿ ಕೆಲವು ವಿದ್ಯಾರ್ಥಿಗಳು ಸಿಗರೇಟ್ ಸೇದುವುದನ್ನು ಭದ್ರತಾ ಸಿಬ್ಬಂದಿ ವಿರೋಧಿಸಿದ ನಂತರ ಘರ್ಷಣೆ ಉಂಟಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
“ಭಾನುವಾರ ರಾತ್ರಿ 10.30 ರ ಸುಮಾರಿಗೆ ಎರಡು ಕಡೆಯವರ ನಡುವೆ ವಾಗ್ವಾದ ನಡೆದು ಘರ್ಷಣೆಗೆ ಕಾರಣವಾಯಿತು. ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡವು 33 ಜನರನ್ನು ವಶಕ್ಕೆ ತೆಗೆದುಕೊಂಡಿತು. ಪೊಲೀಸರು ಎರಡೂ ಕಡೆಯಿಂದ ದೂರುಗಳನ್ನು ಸ್ವೀಕರಿಸಿದ್ದಾರೆ ಮತ್ತು ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ” ಎಂದು ಪೊಲೀಸ್ ವಕ್ತಾರರು ಹೇಳಿದರು.
ಘಟನೆಯ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದೆ. ಕೋಲು ಹಿಡಿದ ಕೆಲವು ವ್ಯಕ್ತಿಗಳು ಹಾಸ್ಟೆಲ್ನ ಹೊರಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಮತ್ತು ಕಾರುಗಳನ್ನು ಒಡೆದು ಹಾಕುತ್ತಿರುವುದನ್ನು ತೋರಿಸಲಾಗಿದೆ.